ಮಂಗಳೂರು: ದುಬೈನಿಂದ ಅಕ್ರಮ ಸಾಗಾಟದ ಚಿನ್ನ, ನಿಕೋಟಿನ್ ಲಿಕ್ವಿಡ್ ವಶ
Update: 2024-12-07 14:49 GMT
ಮಂಗಳೂರು,ಡಿ.7: ಅಕ್ರಮವಾಗಿ ದುಬೈನಿಂದ ಸಾಗಾಟ ಮಾಡುತ್ತಿದ್ದ 48.75 ಲ.ರೂ. ಮೌಲ್ಯದ ಚಿನ್ನ ಹಾಗೂ 1.41 ಲ.ರೂ. ಮೌಲ್ಯದ ಇ-ಸಿಗರೇಟ್‌ನ ನಿಕೋಟಿನ್ ಲಿಕ್ವಿಡ್‌ನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಡಿ.1 ಮತ್ತು 2ರಂದು ವಶಕ್ಕೆ ಪಡೆದುಕೊಂಡಿದ್ದಾರೆ.
ದುಬೈನಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕಾಸರಗೋಡಿನ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಅಂಡಾಕಾರದ ಕವರ್‌ನಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ 625 ಗ್ರಾಂ ತೂಕದ 48,75,000 ರೂ. ಮೌಲ್ಯದ ಚಿನ್ನವನ್ನು ದೇಹದ ಭಾಗಗಳಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿರು ವುದು ಪತ್ತೆಯಾಗಿದೆ. ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಇ-ಸಿಗರೇಟ್‌ಗೆ ಬಳಕೆ ಮಾಡುವ 1,41,134 ರೂ.ಮೌಲ್ಯದ ನಿಕೋಟಿನ್ ಲಿಕ್ವಿಡ್‌ನ 147 ರಿಫಿಲ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.