ಮಂಜನಾಡಿ ಗ್ಯಾಸ್ ದುರಂತ: ಗಾಯಗೊಂಡಿದ್ದ ವಿದ್ಯಾರ್ಥಿಗಳಿಗಾಗಿ ದಿನಾ ಆಸ್ಪತ್ರೆಗೆ ತೆರಳಿ ದೈರ್ಯ ತುಂಬಿದ್ದ ಶಿಕ್ಷಕ ಸಂತೋಷ್
ಕೊಣಾಜೆ: ಶಿಕ್ಷಕರೆಂದರೆ ಕೇವಲ ಬೋಧಕರು ಮಾತ್ರವಲ್ಲ ಹೃದಯವಂತರೂ ಹೌದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ತನ್ನಲ್ಲಿರುವ ಜ್ಞಾನವನ್ನು ಧಾರೆಯೆರೆಯುವ ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗಾಗಿ ಮಾನವೀಯತೆಯನ್ನೂ ಮೆರೆದಿರುವ ಉದಾಹರಣೆಗಳೂ ಇವೆ. ಇದಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಇಲ್ಲಿಯ ಮುಖ್ಯೋಪಾಧ್ಯಾಯ ರಾದ ಸಂತೋಷ್ ಅವರು ಸಾಕ್ಷಿಯಾಗಿದ್ದಾರೆ.
ಡಿ.8ರಂದು ಮಂಜನಾಡಿಯಲ್ಲಿ ಗ್ಯಾಸ್ ದುರಂತ ಸಂಭವಿಸಿ ತಾಯಿ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಗಾಯಗೊಂಡ ಒಂಭತ್ತನೇ ತರಗತಿಯ ಮೆಅದಿಯಾ, ಏಳನೆ ತರಗತಿಯ ಮಾಝಿಯಾ ಮತ್ತು ನಾಲ್ಕನೇ ತರಗತಿಯ ಮಾಯಿಝ ಅವರು ಸಂತೋಷ್ ಅವರು ಮುಖ್ಯೋಪಾಧ್ಯಾಯರಾಗಿರುವ ಮೊಂಟೆಪದವು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು.
ಗ್ಯಾಸ್ ದುರಂತ ನಡೆದು ತನ್ನ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆನ್ನುವ ಸುದ್ದಿ ತಿಳಿದು ಆಸ್ಪತ್ರೆಗೆ ದೌಡಾಯಿ ಸಿದ ಸಂತೋಷ್ ಅವರಿಗೆ ದುಃಖ ಮಡುಗಟ್ಟಿತ್ತು. ಬಳಿಕ ಮಕ್ಕಳು ಗುಣಮುಖರಾಗಲೆಂದು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ದೈರ್ಯ ತುಂಬಲೆಂದು ದಿನಾ ಸಂಜೆ 4.30ರಿಂದ ಆಸ್ಪತ್ರೆಗೆ ಬರತೊಡಗಿದ ಅವರು ರಾತ್ರಿಯವರೆಗೂ ಐಸಿಯು ಬಳಿಯೇ ನಿಂತು ಬಳಿಕ ಮನೆಗೆ ಹೋಗುತ್ತಿದ್ದರು ಎಂಬುದನ್ನು ವಿದ್ಯಾರ್ಥಿಗಳ ಕುಟುಂಬದ ಸದಸ್ಯರು ನೆನಪಿಸುತ್ತಾರೆ.
ಸುಟ್ಟ ಗಾಯಗಳ ನಡುವೆಯೂ ಶಿಕ್ಷಕರನ್ನು ಗುರುತಿಸಿದ್ದ ವಿದ್ಯಾರ್ಥಿಗಳು!
ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳು ಶಿಕ್ಷಕ ಸಂತೋಷ್ ಅವರನ್ನು ಗುರುತು ಹಿಡಿದು ಸರ್ ನಮ್ಮ ಹೋಮ್ ವರ್ಕ್ ಬಾಕಿ ಆಗಿದೆ, ನಾವಿನ್ನು ಪಾಸಾಗಲ್ಲ, ಪೈಲ್ ಆಗ್ತೇವಾ ? ನಮ್ಮ ಭವಿಷ್ಯ ಹೋಯ್ತಲ್ಲ ಎಂದು ಹೇಳಿ ಅಳುತ್ತಿದ್ದಾಗ ಸಂತೋಷ್ ಅವರು ಇಲ್ಲ ಮಕ್ಕಳೆ ನಿಮಗೆ ತೊಂದರೆ ಆಗುವುದಿಲ್ಲ, ನಿಮಗೆ ಎಕ್ಸಾಮ್ ಇಲ್ಲ, ನಿಮ್ಮನ್ನು ಪಾಸ್ ಮಾಡ್ತೇವೆ ಎಂದು ಅವರಿಗೆ ದೈರ್ಯ ತುಂಬುವ ಕಾರ್ಯವನ್ನು ಮಾಡಿದ್ದರು. ಅಲ್ಲದೆ ಶಾಲೆಯಲ್ಲೂ ಮೂವರು ವಿದ್ಯಾರ್ಥಿಗಳೂ ಗುಣಮುಖರಾಗಲೆಂದು ಎಲ್ಲಾ ಮಕ್ಕಳೊಂದಿಗೆ ಪ್ರಾರ್ಥಿಸುತ್ತಿದ್ದರು.
ವೈದ್ಯರು ಚರ್ಮದ ಚಿಕಿತ್ಸೆಗಾಗಿ ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆ ಎಂದು ಹೇಳಿದಾಗ ಶಿಕ್ಷಕ ಸಂತೋಷ್ ಅವರು ಶಾಲೆಗೆ ತೆರಳಿ ಇತರ ಶಿಕ್ಷಕರು, ದಾನಿಗಳು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಚಿಕಿತ್ಸೆಗಾಗಿ ಸುಮಾರು ಒಂದೂವರೇ ಲಕ್ಷ ದಷ್ಟು ಹಣವನ್ನು ಸಂಗ್ರಹಿಸಿ ಕೊಡುವ ಕಾರ್ಯವನ್ನೂ ಮಾಡಿದ್ದರು. ಅಲ್ಲದೆ ಇವರೊಂದಿಗೆ ಶಾಲೆಯ ದಾಖಲೆಗಳನ್ನು ಕೊಂಡೊಯ್ಯಲು ಆಶಾ ಹಾಗೂ ಪ್ರಮೀಳ ಎಂಬ ಶಿಕ್ಷಕಿಯರೂ ಅಲೆದಾಟ ನಡೆಸಿದ್ದರು.
ಆದರೆ ವಿಧಿಯ ಲೀಲೆ ಎಂಬಂತೆ ಶಾಲೆಯ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರು ವುದು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳಲ್ಲಿ ಕಣ್ಣೀರಧಾರೆಯನ್ನು ಹರಿ ಸಿತ್ತು. ಆದರೆ ಈ ನೋವಿನ ನಡುವೆಯೂ ಗುರು ಶಿಷ್ಯರ ಸಂಬಂಧ ಮಾನವೀಯತೆ ಮೆರೆದಿದೆ.
"ನಾಲ್ಕನೇ, ಏಳನೇ ಹಾಗೂ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಈ ವಿದ್ಯಾರ್ಥಿಗಳು ಕಲಿಯುವುದರಲ್ಲಿ ಮಾತ್ರವಲ್ಲ, ಕ್ರೀಡೆ ಸೇರಿದಂತೆ ಇತರ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯವಾಗಿದ್ದರು. ಇಂತಹ ಪ್ರೀತಿಯ ವಿದ್ಯಾರ್ಥಿಗಳ ರಕ್ಷಣೆಗಾಗಿ ಎಲ್ಲಾ ರೀತಿಯಲ್ಲೂ ಪ್ರಯತ್ನ ಪಟ್ಟೆವು. ಶಾಲೆಯಲ್ಲಿ ಪ್ರಾರ್ಥಿಸಿದೆವು, ಮಾತಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಮಾನಸಿಕ ವಾಗಿ ದೈರ್ಯ ತುಂಬುವ ಪ್ರಯತ್ನ ಮಾಡಿದ್ದೆವು. ಆದರೆ ಇಬ್ಬರು ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ಆಗಿಲ್ಲ ಎಂಬ ನೋವು ಇದೆ".
-ಸಂತೋಷ್ ಕುಮಾರ್ ಟಿ.ಎನ್., ಮುಖ್ಯೋಪಾಧ್ಯಾಯರು