ಮೂಡುಬಿದಿರೆ: ಆಳ್ವಾಸ್ ನಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ; 30 ಸಾವಿರಕ್ಕೂ ಅಧಿಕ ಮಂದಿ ಭಾಗಿ
ಮೂಡಬಿದ್ರೆ, ಜ.26: ಭಾರತದ ಸಂಸ್ಕೃತಿಯ ಸಾರವನ್ನು ನಾವು ಕರ್ನಾಟಕದಲ್ಲಿ ಕಾಣಬಹುದು. ಆದರೆ, ಕರ್ನಾಟಕದ ಸಾಂಸ್ಕೃತಿಕ ಸಾರವನ್ನು ನಾವೆಲ್ಲ ಆಳ್ವಾಸ್‌ನಲ್ಲಿ ನೋಡಬೇಕು. ಆಳ್ವಾಸ್ ನಮ್ಮ ಸಂಸ್ಕೃತಿ ಬಿಂಬಿಸುವ ಮಿನಿ ಭಾರತ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿ ಆವರಣದ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ಸಂದರ್ಭ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ರೈತರು, ಶೋಷಿತರು, ಬಡವರು ಸೇರಿದಂತೆ ದೇಶದ ಧ್ವನಿ ರಹಿತರೆಲ್ಲ ಇಷ್ಟೊಂದು ಧೈರ್ಯದಿಂದ ಈ ದೇಶದಲ್ಲಿ ಜೀವಿಸಲು ಕಾರಣವೇ ಡಾ.ಬಿ.ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಬಂತು. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ದೇಶದ ಏಕತೆಯನ್ನು ಸಂವಿಧಾನ ಉಳಿಸಿದೆ. ಪ್ರತಿ ಭಾರತೀಯನೂ ಈ ಸಂವಿಧಾನದ ಇತಿಹಾಸ, ಅರ್ಥ ತಿಳಿದುಕೊಳ್ಳಬೇಕು ಎಂದರು.
ವಂದೇ ಮಾತರಂ ಗಾಯನದ ಬಳಿಕ ಧ್ವಜಾರೋಹಣ ನಡೆಯಿತು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ಬಳಿಕ ಕೋಟಿ ಕಂಠೋಂಸೇ ನಿಖ್‌ಲೇ ಹಾಡಿಗೆ ಸೇರಿದ್ದ 30 ಸಾವಿರಕ್ಕೂ ಅಧಿಕ ಮಂದಿ ಪುಟಾಣಿ ಧ್ವಜಗಳನ್ನು ಬೀಸುತ್ತಾ ದನಿಗೂಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಇಂದ್ರೇಶ್ ಗೌಡ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಬಳಿಕ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಹರ್ಷಾರೆಡ್ಡಿ ನೇತೃತ್ವದಲ್ಲಿ ಗೌರವ ವಂದನೆ ನೀಡಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಾಜಿ ಸಚಿವರಾದ ಪಿಪಿ.ಜಿ.ಆರ್. ಸಿಂಧ್ಯಾ, ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ಸುಮಾರು 250ಕ್ಕೂ ಅಧಿಕ ಮಾಜಿ ಸೈನಿಕರು ಪಾಲ್ಗೊಂಡಿದ್ದರು.