ಮೂಡುಶೆಡ್ಡೆ | ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸಿದ ಕಾರು ಢಿಕ್ಕಿ: ಮಹಿಳೆಗೆ ಗಂಭೀರ ಗಾಯ

Update: 2024-02-20 10:25 GMT

ಮಂಗಳೂರು, ಫೆ.20: ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಚಲಾಯಿಸಿದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಢಿಕ್ಕಿ ಹೊಡೆದ ಘಟನೆ ನಗರ ಹೊರವಲಯದ ಮೂಡುಶೆಡ್ಡೆ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಮೂಡುಶೆಡ್ಡೆ ನಿವಾಸಿ ಮಮತಾ ಗಾಯಗೊಂಡ ಮಹಿಳೆ. ಗಂಭೀರ ಗಾಯಗಳಾಗಿರುವ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಮತಾ ಪ್ರತಿನಿತ್ಯದಂತೆ ಕೆಲಸಕ್ಕೆ ತೆರಳಲು ಮೂಡುಶೆಡ್ಡೆಯಲ್ಲಿ ಬಸ್ಸಿಗಾಗಿ ಕಾಯುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರನ್ನು ಶಾಲಾ ವಿದ್ಯಾರ್ಥಿಯೊಬ್ಬ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News