ಬಂಟ್ವಾಳ : ಸಿಪಿಐ ನಿಂದ ಜನಾಗ್ರಹ ಚಳವಳಿ
ಬಂಟ್ವಾಳ: ರಾಜ್ಯ ಸರಕಾರ ಕೊಟ್ಟ ಭರವಸೆಗಳನ್ನು ಈಡೇರಿಸುವಂತೆ ಹಾಗೂ ಜನ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಪಕ್ಷದ ರಾಜ್ಯ ಮಂಡಳಿ ಕರೆಯಂತೆ ರಾಜ್ಯದಾದ್ಯಂತ ನಡೆಯುವ ಚಳುವಳಿಯ ಭಾಗವಾಗಿ ಶನಿವಾರ ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಎದುರು ಪಕ್ಷದ ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಜನಾಗ್ರಹ ಚಳುವಳಿ ನಡೆಯಿತು.
ಚಳುವಳಿಗಾರರನ್ನುದ್ದೇಶಿಸಿ ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಸಿಪಿಐ ಮುಖಂಡ ವಿ.ಕುಕ್ಯಾನ್, ಪಕ್ಷದ ರಾಜ್ಯ ಮಂಡಳಿ ಸದಸ್ಯ ಎಂ.ಕರುಣಾಕರ ಮಾತನಾಡಿ ಕಳೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ದುರಾಡಳಿತದಿಂದ ರೋಸಿ ಹೋದ ರಾಜ್ಯದ ಜನತೆ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತಂದಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಹಲವಾರು ಗ್ಯಾರಂಟಿಗಳನ್ನು ಜ್ಯಾರಿಗೆ ತಂದಿದೆ. ಸರಕಾರದ ಈ ನಡೆಯನ್ನು ಸಿಪಿಐ ಸ್ವಾಗತಿಸಿದೆ. ಅದರ ಜೊತೆಗೆ 6 ನೇ ಗ್ಯಾರಂಟಿಯಾಗಿ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಘೋಷಿಸಿದ ಭರವಸೆಗಳು ಅನುಷ್ಠಾನಗೊಂಡಿಲ್ಲ ಎಂದ ಅವರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಚಳುವಳಿಯ ನೇತೃತ್ವವನ್ನು ಪಕ್ಷದ ತಾಲೂಕು ಮುಖಂಡ ಬಿ.ಬಾಬು ಭಂಡಾರಿ, ಸಹಕಾರ್ಯದರ್ಶಿ ಪ್ರೇಮನಾಥ ಕೆ, ಕೋಶಾಧಿಕಾರಿ ಶ್ರೀನಿವಾಸ ಭಂಡಾರಿ, ಬಿ.ಎಂ ಹಸೈನಾರ್ ವಿಟ್ಲ, ರಾಮ ಮುಗೇರ, ಒ. ಕೃಷ್ಣ, ಎಐವೈಎಫ್ ನ ನಾಯಕ ಹರ್ಷಿತ್, ಮೋಹನ್ ಅರಳ, ಸೀತರಾಮ ಕನ್ಯಾನ, ಎನ್ ಎಫ್ ಐ ಡಬ್ಲ್ಯೂ ರಾಜ್ಯ ನಾಯಕಿ ಭಾರತಿ ಪ್ರಶಾಂತ್, ಉಮಾವತಿ ಕುರ್ನಾಡು, ಶಮಿತಾ, ಮಮತಾ, ಕೇಶವತಿ, ಮೋಹಿನಿ, ಸರೋಜಿನಿ ಕುರಿಯಾಳ, ಸಿಪಿಐ ನಾಯಕರುಗಳಾದ ಮೋಹನ್ ಅರಳ, ದೇರಣ್ನ ಅನಂತಾಡಿ, ಎಂಬಿ ಭಾಸ್ಕರ, ಚಂದಪ್ಪ ನಾವೂರು,ಗಿರಿಯಪ್ಪ ಅನಂತಾಡಿ,ಸೀತ ಅನಂತಾಡಿ ವಹಿಸಿದ್ದರು.
ಪಕ್ಷದ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಪ್ರಾಸ್ತಾವನೆಗೈದು ಸ್ವಾಗತಿಸಿದರು, ಪ್ರೇಮನಾಥ ಕೆ ವಂದಿಸಿದರು.