ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆ: ಮುಲ್ಲೈ ಮುಗಿಲನ್

Update: 2024-03-14 09:07 GMT

ಮಂಗಳೂರು, ಮಾ.14: ಮಣ್ಣು, ನೀರು, ಗಾಳಿ ಸೇರಿದಂತೆ ನೈಸರ್ಗಿಕ ಸಂಪತ್ತಿನ ಮಿತ ಬಳಕೆ, ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ನಿವಾಸದಲ್ಲಿ ಜಿಲ್ಲಾಡಳಿತ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ವಿವಿ ಯುವ ರೆಡ್ ಕ್ರಾಸ್ ಘಟಕ, ಬ್ಯಾಂಕ್ ಆಫ್ ಬರೋಡಾದ ಸಹಯೋಗದಲ್ಲಿ ಹಮ್ಮಿಕೊಂಡಿರುವ "ಜೀವಜಲ ಉಳಿಸಿ ಅಭಿಯಾನ'ದ ಜಲ ಸಂರಕ್ಷಣೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ, ನೀರಿನ ಪಾತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡುತ್ತಿದ್ದರು.

ನೈಸರ್ಗಿಕ ಸಂಪತ್ತಾಗಿರುವ ನೀರು ಜಗತ್ತಿನ ಈಗಿನ ಮತ್ತು ಭವಿಷ್ಯದ ಸಕಲ ಜೀವರಾಶಿಗಳಿಗೆ ಸೇರಿದೆ. ಇದನ್ನು ಮಿತವಾಗಿ ಬಳಸುವುದು, ಉಳಿಸುವುದು ಅತೀ ಅಗತ್ಯ. ಈ ಬಗ್ಗೆ ಸಾಮೂಹಿಕ ಜಾಗೃತಿ ಅಗತ್ಯವಿದೆ. ಪ್ರತಿಯೊಬ್ಬರು ಈ ಬೇಸಗೆಯ ಸಂದರ್ಭದಲ್ಲಿ ನೀರು ಉಳಿಸುವ ಮತ್ತು ಪ್ರಾಣಿ, ಪಕ್ಷಿಗಳ ಜೀವರಕ್ಷಣೆಗೆ ತಮ್ಮ ಮನೆಯ ಹಿತ್ತಲಲ್ಲಿ ಸಣ್ಣ ಪಾತ್ರಗಳಲ್ಲಿ ನೀರು ಇಡುವ ಕೆಲಸದಲ್ಲಿ ಕೈ ಜೋಡಿಸಬೇಕಾಗಿದೆ ಎಂದು ಮುಲ್ಲೈ ಮುಗಿಲನ್ ಕರೆ ನೀಡಿದರು.

ಜೀವ ಜಲ ಉಳಿಸಿ ಅಭಿಯಾನಕ್ಕೆ ಬ್ಯಾಂಕ್ ಆಫ್ ಬರೋಡಾದ ಎಲ್ಲಾ ಶಾಖೆಗಳ ಮೂಲಕ ಸಹಕಾರ ನೀಡುವುದಾಗಿ ಬ್ಯಾಂಕ್ ಆಫ್ ಬರೋಡಾದ ಮಹಾ ಪ್ರಬಂಧಕಿ ಮತ್ತು ಮಂಗಳೂರು ವಲಯದ ಬ್ಯಾಂಕ್ ನ ಮುಖ್ಯಸ್ಥೆ ಗಾಯತ್ರಿ ಆರ್. ತಿಳಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಬಂಧಕ ಸತೀಶ್ ಪಾಠ್ಕರ್, ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ವಿಜಯ ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್., ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ಗಾಯತ್ರಿ ಎನ್ ಮನಪಾ ಅಭಿಯಂತರ ಅಶ್ವಿನ್,ಇಂಡಿಯನ್ ರೆಡ್ ಕ್ರಾಸ್ ಘಟಕದ ಹಿರಿಯ ಸದಸ್ಯ ರವೀಂದ್ರನಾಥ ಉಚ್ಚಿಲ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ರಾಜೇಶ್ ದಡ್ಡಂಗಡಿ, ಮಂಗಳೂರು ವಿವಿ ಕಾಲೇಜು, ಬೆಸೆಂಟ್, ಗೋಕರ್ಣನಾಥ, ರಾಮಕೃಷ್ಣ ಮತ್ತು ರೋಶನಿ ನಿಲಯ ಕಾಲೇಜುಗಳ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News