ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್ ಗೆ ಉತ್ತರಿಸದ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕ‌: ಆರೋಪ

Update: 2024-07-09 16:47 GMT

ಪಣಂಬೂರು: ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಪಲ್ಗುಣಿ ನದಿಗೆ ಬಿಡುವ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಶೋಕಾಸ್‌ ನೋಟಿಸ್‌ ನ ಅವಧಿ ಮುಗಿದಿದ್ದರೂ ಮಾಲಿನ್ಯ ನಿಯಂತ್ರನ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೋಕಟ್ಟೆ ಹೋರಾಟ ಸಮಿತಿ ಆರೋಪಿಸಿದೆ.

ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಪಲ್ಗುಣಿ ನದಿಗೆ ಬಿಡುತ್ತಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸತತವಾಗಿ ಹೊರಾಟಗಳನ್ನು ನಡೆಸಿತ್ತು. ಅಲ್ಲದೆ ಇತ್ತೀಚೆಗೆ ನಾಗರೀಕ ಹೋರಾಟ ಸಮಿತಿಯು ಮಾಲಿನ್ಯ ನಿಯಂತ್ರಣ ಮಂಡಳಿಗೆ ಭೇಟಿ ನೀಡಿ ದೂರು ನೀಡಿತ್ತು. ಜೊತೆಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿತ್ತು.

ಈ ಹಿನ್ನೆಲೆಯಲ್ಲಿ ಜೂನ್‌ 24ರಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ. ಮಹೇಶ್ವರಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕಕ್ಕೆ ಭೇಟಿ ನೀಡಿ ತಪಾಸನೆ ನಡೆಸಿತ್ತು. ಅಲ್ಲದೆ, ಮೇಲ್ನೋಟಕ್ಕೆ ಘಟಕದಿಂದ ಕಲುಶಿತ ನೀರು ಸೋರಿಕೆಯಾಗಿ ನದಿ ಸೇರುತ್ತಿರುವ ಕುರಿತು ಮನಗಂಡು ಘಟಕಕ್ಕೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.

ಮಾಲಿನ್ಯ ನಿಯಂತ್ರಣಾ ಮಂಡಳಿಯು ನೀಡಿದ್ದ ಶೋಕಾಸ್‌ ನೋಟಿಸ್‌ ನಲ್ಲಿ 15ದಿನಗಳ ಕಾಲಾವಕಾಶ ನೀಡಲಾಗಿದ್ದು, ಹೋರಾಟ ಸಮಿತಿಯ ಆರೋಪಗಳು ಮತ್ತು ಅಧಿಕಾರಿಗಳ ತನಿಖೆಯ ವೇಳೆ ದೊರೆತಿರುವ ಮಾಹಿತಿಗಳು ಸುಳ್ಳು ಎಂದು ಸಾಬೀತು ಪಡಿಸುವಂತೆ ತಿಳಿಸಲಾಗಿತ್ತು. ಜೊತೆಗೆ ಆರೋಪ ಸಾಬೀತು ಪಡಿಸುವವ ವರೆಗೆ ಪತಂಜಲಿ ಫುಡ್ ಲಿಮಿಟೆಡ್ ನ ಪ್ಲಾಟ್ ಸಂಖ್ಯೆ 2P, 3P ಮತ್ತು 4Pಯನ್ನು ತನಿಖೆ ಕೈಗೊಂಡು ಮುಂದಿನ ಆದೇಶದ ವರೆಗೆ ಮುಚ್ಚಿಸುವುದು, ಘಟಕಕ್ಕೆ ನೀಡಿರುವ ವಿದ್ಯುತ್‌ ಸಂಪರ್ಕವನ್ನು ಕಡಿತ ಗೊಳಿಸುವುದು ಮತ್ತು ಘಟಕವನ್ನು ಜಿಲ್ಲಾಧಿಕಾರಿ ವಶಕ್ಕೆ ಪಡೆದು ಮುಚ್ಚಿಸುವ ಕುರಿತಾಗಿ ಪ್ರಸ್ತಾಪಿಸಿತ್ತು.

ಸದ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕಕ್ಕೆ ನೀಡಿದ್ದ ಕಾಲಾವಕಾಶ ಜು.8ಕ್ಕೆ ಮುಗಿದಿದ್ದು, ಘಟಕವು ಹೋರಾಟ ಸಮಿತಿಯ ಆರೋಪಗಳನ್ನು ಸುಳ್ಳು ಎಂದು ಸಾಬೀತು ಪಡಿಸುವ ಯಾವುದೇ ಉತ್ತರ ವನ್ನು ಈ ವರೆಗೂ ಮಾಲಿನ್ಯ ನಿಯಂತ್ರನ ಮಂಡಳಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ. ಹೀಗಿದ್ದರೂ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕಕ್ಕೆ ಬೀಗಜಡಿಯಲು ಅಧಿಕಾರಿಗಳು ಯಾಕೆ ಹಿಂದೇಟು ಹಕುತ್ತಿದ್ದಾರೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಶ್ನೆ ಮಾಡಿದ್ದಾರೆ.

"ಪ್ರಧಾನವಾಗಿ ನದಿ ಉಳಿಸುವುದ ಎಲ್ಲರ ಕರ್ತವ್ಯ. ನದಿ ಪಾತ್ರದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಮಾಲಿನ್ಯ ನಿಯಂತ್ರನ ಮಂಡಳಿಯ ಸೂಚನೆ, ಶೋಕಾಸ್‌ ನೋಟಿಸ್‌ ನ ಬಳಿಕವೂ ಮಾಲಿನ್ಯ ಸತತ ವಾಗಿ ಗೋಚರಿಸು ತ್ತಿದೆ. ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕವನ್ನು ರಕ್ಷಿಸುವ ಸಲುವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗದೆ ಮೃದುಧೋರಣೆ ಅನುಸರಿಸಿದರೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ವಿರುದ್ಧ ಬೃಹತ್‌ ಪ್ರತಿಭಟನೆಯನ್ನು ಸಂಘಟಿಸಲಾಗುವುದು".

- ಮುನೀರ್‌ ಕಾಟಿಪಳ್ಳ, ಜೋಕಟ್ಟೆ ಹೋರಾಟ ಸಮಿತಿ ಸಂಚಾಲಕ

"ಅಧಿಕಾರಿಗಳ ಭೇಟಿ ಪರಿಶಿಲನೆಯ ಬಳಿಕವೂ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕದಿಂದ ಕಲುಶಿತ ನೀರು ಹಳ್ಳದ ಮೂಲಕ ನದಿ ಸೇರುತ್ತಿದೆ. ಮಳೆಗಾಲವಾಗಿರುವ ಕಾರಣ ನದಿಯು ನೀರು ಕೆಸರಾಗಿರು ಹಿನ್ನೆಲೆಯಲ್ಲಿ ಎಣ್ಣೆಯ ಪದಾರ್ಥ ಅಷ್ಟಾಗಿ ಗೋಚರಿಸುತ್ತಿಲ್ಲ".

- ಅಬೂಬಕರ್‌ ಬಾವ, ಜೋಕಟ್ಟೆ ಗ್ರಾಮ ಪಂಚಾಯತ್‌ ಸದಸ್ಯ

"ಶೊಕಾಸ್‌ ನೋಟಿಸ್‌ ಗೆ ಪತಂಜಲಿ ಫುಡ್ಸ್ ರುಚಿ ಸೋಯಾ ಘಟಕದಿಂದ ಉತ್ತರ ನೀಡಿದ್ದಾರೆ. ಪರಿಶೀಲನೆ ನಡೆಸಿ ಅವರ ಕಡತವನ್ನು ಬೆಂಗಳೂರಿಗೆ ಕಳುಹಿಸಲಾಗುವುದು. ಮುಂದಿನ ಕ್ರಮವನ್ನು ಬೆಂಗಳೂರು ಕಚೇರಿಯಿಂದಲೇ ತೆಗೆದು ಕೊಳ್ಳುತ್ತಾರೆ".

- ವಿಜಯಾ ಹೆಗ್ಡೆ, ಪರಿಸರ ಅಧಿಕಾರಿ. ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News