ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ನಾಲ್ಕು ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

Update: 2024-10-08 15:07 GMT

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ. ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಮಂಗಳವಾರ ಘೋಷಿಸಲಾಯಿತು.

ಸರಸ್ವತಿ ಬಲ್ಲಾಳ್ ಮತ್ತು ಡಾ.ಸಿ.ಕೆ. ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿʼಗೆ ಬಂಟ್ವಾಳದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಸ್ಥಾಪಕರಾದ ಇತಿಹಾಸ ಪ್ರಾಧ್ಯಾಪಕ ಪ್ರೊ. ತುಕರಾಂ ಪೂಜಾರಿ, ಹಿರಿಯ ಭಾಷಾ ತಜ್ಞ ಡಾ.ಯು.ಪಿ. ಉಪಾಧ್ಯಾಯ ಅವರ ಹೆಸರಿನ ‘ಮಹೋಪಾಧ್ಯಾಯ ಪ್ರಶಸ್ತಿ’ಗೆ ಕರಾವಳಿ ಭಾಗದ ಕನ್ನಡ ಸಾಹಿತ್ಯ ವಲಯದ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿರುವ ಪ್ರೊ. ವರದರಾಜ ಚಂದ್ರಗಿರಿ ಅವರು ಆಯ್ಕೆಯಾಗಿದ್ದಾರೆ.

ಧಾರವಾಡದ ಹಿರಿಯ ಸಾಹಿತಿ ಡಾ.ಜಿ.ಎಂ. ಹೆಗಡೆ ಅವರ ದತ್ತಿನಿಧಿಯ ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ ಕಾಸರ ಗೋಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಯು. ಮಹೇಶ್ವರಿ ಅವರಿಗೆ ಒಲಿದಿದ್ದು, ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ ‘ಮಂಜನಬೈಲ್ ರಂಗಸನ್ಮಾನ್’ ಪ್ರಶಸ್ತಿಗೆ ಕಲಾವಿದ, ನಟ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಬೆಳಗಾವಿಯ ಡಾ. ಅರವಿಂದ ಕುಲಕರ್ಣಿ ಅವರು ಬಾಜನರಾಗಿದ್ದಾರೆ.

ಪ್ರಶಸ್ತಿಯು ತಲಾ 10ಸಾವಿರ ರೂ. ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನಗಳನ್ನು ಒಳಗೊಂಡಿದ್ದು, 2024ರ ನವಂಬರ್ 1ರಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಕಾಂತಾವರ ಉತ್ಸವ’ದಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು ಎಂದು ಕಾಂತಾವರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News