ಮುಮ್ತಾಝ್ ಅಲಿ ಪ್ರಕರಣ| ಆರೋಪಿ ಸತ್ತಾರ್‌ಗೆ ಊರಿನಿಂದ ಬಹಿಷ್ಕಾರ ಹಾಕಲು ಕೃಷ್ಣಾಪುರ ಜಮಾಅತ್‌ ಸದಸ್ಯರ ಒತ್ತಾಯ

Update: 2024-10-08 17:51 GMT

ಸುರತ್ಕಲ್:‌ ಮುಮ್ತಾಝ್ ಅಲಿ ಅವರ ಪ್ರಕರಣದಲ್ಲಿ ಆರೋಪಿ ಅಬ್ದುಲ್‌ ಸತ್ತಾರ್‌ ಗೆ ಊರಿನಿಂದ ಬಹಿಷ್ಕಾರ ಹಾಕಬೇಕೆಂದು ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಜಮಾಅತ್‌ ಸದಸ್ಯರು ಮಸೀದಿ ಬಳಿ ಜಮಾಯಿಸಿ ಆಗ್ರಹಿಸಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.

ಇಲ್ಲಿನ ಸ್ಥಳೀಯ ಸಂಸ್ಥೆಗಳಾದ ಚಾಲೆಂಜ್‌ ಫ್ರೆಂಡ್ಸ್‌ ಸರ್ಕಲ್‌ (ರಿ) ಮತ್ತು ಸತ್ತಾರ್‌ ಅಧ್ಯಕ್ಷನಾಗಿದ್ದ ನ್ಯೂಫ್ರೆಂಡ್ಸ್‌ ಕ್ಲಬ್‌ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿತ್ತು. ಈ ಮನವಿಯಲ್ಲಿ ಸೋಮವಾರ ನಮ್ಮ ಜಮಾಅತ್‌ ನಲ್ಲಿ ದಫನ ಮಾಡಲ್ಪಟ್ಟ ಹಾಜಿ ಮುಮ್ತಾಝ್ ಅಲಿ ಅವರ ಸಾವಿಗೆ ಕಾರಣನಾದ ಸತ್ತಾರ್‌ ಗೆ ಊರಿನಿಂದ ಬಹಿಷ್ಕಾರ ಹಾಕಬೇಕು. ಆತನ ಮರಣಾ ನಂತರ ಯಾವುದೇ ಕಾರಣಕ್ಕೂ ನಮ್ಮ ಜಮಾಅತ್‌ ಗೆ ಒಳಪಡುವ ಯಾವುದೇ ದಫನ ಭೂಮಿಯಲ್ಲಿ ದಫನಕ್ಕೂ ಅವಕಾಶ ನೀಡಬಾರದು, ಆತನಿಗೆ ಜೊತೆ ನೀಡಿದ ಸಿರಾಜ್‌ ಮತ್ತು ಮುಸ್ತಫಾ ಅವರ ಮೇಲಿನ ಆರೋಪ ಸಾಬೀತಾದರೆ ಅವರಿಗೂ ಇದೇ ರೀತಿಯಾಗಿ ಕ್ರಮ ವಹಿಸಬೇಕೆಂದು ಆಗ್ರಹಿಸಿತ್ತು.

ಜಮಾಅತ್‌ ಅವರ ಈ ಮೇಲಿನ ಬೇಡಿಕೆ ಈಡೇರಿಸುವಂತೆ ಮಂಗಳವಾರ ರಾತ್ರಿ ಕೃಷ್ಣಾಪುರದ ಕೇಂದ್ರ ಬದ್ರಿಯಾ ಜುಮಾ ಮಸೀದಿ ಬಳಿ ಜಮಾಯಿಸಿದ್ದರು. ಈ ವೇಳೆ ಆಡಳಿತ ಸಮಿತಿ ಚರ್ಚಿಸಿ ಮುಂದಿನ ಶುಕ್ರವಾರ ತುರ್ತು ಮಹಾ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತು. ಭರವಸೆಯ ಹಿನ್ನೆಲೆಯಲ್ಲಿ ಮಸೀದಿಯ ಬಳಿ ಜಮಾಯಿಸಿದ್ದ ಜನರು ತಮ್ಮ ಮನೆಗಳಿಗೆ ಹಿಂದಿರುಗಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News