ಮೂಡುಬಿದಿರೆ: ದಸರಾ ಸಾಹಿತ್ಯ, ಸಾಂಸ್ಕೃತಿಕ ಉತ್ಸವ ಸಮಾರೋಪ

Update: 2024-10-08 16:03 GMT

ಮೂಡುಬಿದಿರೆ: ಸಮಾಜ ಮಂದಿರ ಸಭಾ(ರಿ) ಮೂಡುಬಿದಿರೆ ಇದರ ವತಿಯಿಂದ ಐದು ದಿನಗಳ ಕಾಲ ನಡೆದ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭವು ಸೋಮವಾರ ಸಂಜೆ ಸಮಾಜ ಮಂದಿರದಲ್ಲಿ ಜರುಗಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದು, 'ತುಳುನಾಡಿನ ಹಬ್ಬಗಳು ಮತ್ತು ಸೌಹಾರ್ದ ಪರಂಪರೆ' ಎಂಬ ವಿಷಯದ ಕುರಿತು ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು, ಒಂದು ಧರ್ಮದವರು ಇನ್ನೊಂದು ಧರ್ಮದವರು ಆಚರಿಸುವ ಹಬ್ಬಗಳು, ಉತ್ಸವವನ್ನು ಕಂಡು ಮನತುಂಬಿಸಿಕೊಂಡು ಸಂಭ್ರಮಿ ಸುವುದೇ ಸೌಹಾರ್ದ ಇದು ತುಳುನಾಡಿನ ವಿಶೇಷತೆ ಎಂದು ನುಡಿದರು.

ನಮ್ಮ ಹಿರಿಯರು ಉತ್ಸವ, ಜಾತ್ರೆ, ಆರಾಧನೆಯನ್ನು ಎಲ್ಲರನ್ನು ಸೇರಿಸಿಕೊಂಡು‌ ಮಾಡುತ್ತಾ ಬಂದಿದ್ದರು. ಅದರಂತೆ ಮುಂದೆಯೂ ಇದು ನಡೆದುಕೊಂಡು ಹೋಗಬೇಕು. ಇತ್ತೀಚಿನ ದಿನಗಳಲ್ಲಿ ರಾಜಕೀಯದಿಂದಾಗಿ ಮತ, ಧರ್ಮ, ಪಂಥ ವೆಂಬ ವಿಷ ಗಾಳಿಗಳು ಬರುತ್ತಿವೆ. ಇದನ್ನು ತಡೆದು ನಿಲ್ಲಿಸಿ ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ವಿದ್ಯಾವಂತರ, ಬುದ್ಧಿವಂತರ ಜಿಲ್ಲೆಯೆಂದು ಗುರುತಿಸಿಕೊಂಡಿರುವ ನಾವು ದ್ವೇಷ, ವೈಷಮ್ಯ ಬರುವಾಗ ಮೌನ ವಹಿಸುವ ಮೂಲಕ ಮೌನ ಎಷ್ಟು ತೀಕ್ಣ ಎಂದು ತೋರಿಸಿಕೊಡಬೇಕಾಗಿದೆ ಎಂದರು.

ಇದೇ ಸಂದರ್ಭ ಸಾಂಸ್ಕೃತಿಕ ಕ್ಷೇತ್ರದ ಸಾಧಕ ಸಂಸ್ಥೆಗಳಾದ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್(ರಿ), ವೀರ ಮಾರುತಿ ಸೇವಾ ಟ್ರಸ್ಟ್ (ರಿ), ಕೃಷಿ ಕ್ಷೇತ್ರದ ಸಾಧಕ ನಾಗರಾಜ ಶೆಟ್ಟಿ ಅಂಬೂರಿ ಬೆಳುವಾಯಿ, ಸಮಾಜ ಸೇವಾ ಕ್ಷೇತ್ರದ ಬಾಬು ಹಂಡೇಲು, ಕಾಷ್ಠ ಶಿಲ್ಪಿ ನಾರಾಯಣ ಆಚಾರ್ಯ ಅವರಿಗೆ ಸಮಾಜ ಮಂದಿರದ ಗೌರವವನ್ನು ಸಲ್ಲಿಸಲಾಯಿತು.

ಉದ್ಯಮಿ, ರೋಟರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ.ಎಂ.ಅಧ್ಯಕ್ಷತೆ ವಹಿಸಿದ್ದರು. ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಸಂಚಾಲಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News