ದ್ವೇಷದ ಗೋಡೆ ನಿವಾರಣೆಯಾಗಲಿ: ಡಾ.ನಿಕೇತನ

Update: 2024-10-08 17:44 GMT

ಮಂಗಳೂರು: ದ್ವೇಷದ ಗೋಡೆಯನ್ನು ಕೆಡವುದರ ಮೂಲಕ ಮನುಷ್ಯರ ನಡುವೆ ಪ್ರೀತಿ, ಮಾನವೀಯತೆಯನ್ನು ಬೆಳೆ ಸುವ ಬಹಳ ದೊಡ್ಡ ಜವಾಬ್ದಾರಿ ಕವಿಗಳ ಮೇಲಿದೆ ಎಂದು ಉಡುಪಿಯ ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ.ನಿಕೇತನ ಅಭಿಫ್ರಾಯಪಟ್ಟಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಮಯೂರಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನಗರದ ಉರ್ವಾಸ್ಟೋರ್‌ನ ತುಳುಭವನದಲ್ಲಿ ಮಂಗಳವಾರ ನಡೆದ ಮೂರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಭಾಷೆಯ ಅಭಿಯಕ್ತಿ ವ್ಯಕ್ತಪಡಿಸುವ ಮಾಧ್ಯಮವಾಗಿದೆ. ಭಾಷೆಯ ಮೂಲಕ ಮನದೊಳಗಿನ ಭಾವನೆಯನ್ನು ಇನ್ನೊಬ್ಬರಿಗೆ ತಿಳಿಸಲು ಸಾಧ್ಯವಾಗುತ್ತ ಎಂದು ಹೇಳಿದರು.

ಭಾಷೆ ಹುಟ್ಟುವುದಕ್ಕೆ ಮೊದಲು ಸನ್ನೆಯ ಮೂಲಕ ಭಾವನೆ ವ್ಯಕ್ತಪಡಿಸುತ್ತಿದ್ದರು. ಆದರೆ ಅದಕ್ಕೆ ಇತಿಮಿತಿ ಇತ್ತು ಎಂದರು.

ತುಳುನಾಡು ಬಹು ಸಂಸ್ಕೃತಿಯ ತೊಟ್ಟಿಲು ಆಗಿದೆ. ಇಲ್ಲಿ ಆನೇಕ ಭಾಷೆ ನಾವು ಹುಟ್ಟುವಾಗಲೇ ಆನೇಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುತ್ತೇವೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಈ ತುಳುನಾಡಿನಲ್ಲಿ ಇವತ್ತು ಕೆಲವಡೆ ಸಣ್ಣ ಸಣ್ಣ ಕಾರಣ ಕ್ಕಾಗಿ ದ್ವೇಷ ಹುಟ್ಟಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದರಿಂದಾಗಿ ಮನುಷ್ಯ ಮನುಷ್ಯ ನಡುವೆ ದ್ವೇಷದ ಗೋಡೆ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರವಿ ಕಾಣದ್ದನ್ನು ಕವಿ ಕಾಣುತ್ತಾನೆ. ಕವಿಗಳಲ್ಲಿ ಪ್ರತಿಭೆ, ಸ್ಫೂರ್ತಿ, ಸತತ ಓದು ಅಧ್ಯಯನ ಮೂಲಕ ಎಲ್ಲವನ್ನು ಅರಿಯುವ ಶಕ್ತಿ ಇರುತ್ತದೆ ಎಂದರು.

ಒಬ್ಬ ಕವಿ ಹೇಳುವಂತೆ ಒಬ್ಬ ಚೆಂದದ ಹೂಮಾಲೆ ಕಟ್ಟಿದರೆ , ಆ ಹೂವನ್ನು ಚೆನ್ನಾಗಿ ಮುಡಿಯುವರು ಸಿಕ್ಕಿದರೆ ಹೂ ಕಟ್ಟಿದ ವನ ಪ್ರಯತ್ನ ಸಾರ್ಥಕವಾಗುತ್ತದೆ. ಓರ್ವ ಕವಿ ಸೊಗಸಾಗಿ ಬರೆದ ಕವಿತೆಗೆ ಪ್ರೋತ್ಸಾಹ ಸಿಗದಿದ್ದರೆ ಕವಿಯ ಪ್ರಯತ್ನಕ್ಕೆ ಫಲ ದೊರೆಯುವುದಿಲ್ಲ. ಕವಿಗಳಿಗೆ ನಾವು ಕಿವಿಯಾಗಬೇಕು ಎಂದು ನುಡಿದರು.

ಮನುಷ್ಯನಲ್ಲಿ ಇರಬೇಕಾಗಿರುವುದು ಮನಸ್ಸು ಮನಸ್ಸುಗಳನ್ನು ಕಟ್ಟುವ ಪ್ರೀತಿ. ಮಂಗಳೂರಿನಲ್ಲಿ ಆಯೋಜಿಸಲಾದ ಬಹು ಭಾಷಾ ಗೋಷ್ಠಿ, ದ್ವೇಷ ನಿವಾರಿಸುವ ಮನುಷ್ಯ ಮನುಷ್ಯ ನಡುವೆ ಭಾತೃತ್ವ, ಪ್ರೀತಿಯನ್ನು ಕಟ್ಟುವ ಸೇತುವೆಯಾಗಲಿ ಎಂದು ಹಾರೈಸಿದರು.

ಹಿರಿಯ ಸಾಹಿತಿ ಕಾಸರಗೋಡಿನ ರಾಧಾಕೃಷ್ಣ ಉಳಿಯತ್ತಡ್ಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬಯಿ, ತುಳು ಪರಿಷತ್ ಗೌರವಾಧ್ಯಕ್ಷ ಡಾ.ಪ್ರಭಾಕರ ನೀರ್‌ಮಾರ್ಗ ಮುಖ್ಯ ಅತಿಥಿಯಾಗಿ ಭಾಗವಹಿ ಶುಭ ಹಾರೈಸಿದರು.

ಕವಿಗೋಷ್ಠಿಯಲ್ಲಿ ಗೀತಾ ಜೈನ್ (ತುಳು), ಪ್ರಮೀಳಾ ರಾಜ್ ಸುಳ್ಯ (ಕನ್ನಡ), ಚಂದ್ರಾವತಿ ಬಡ್ಡಡ್ಕ (ಅರೆಭಾಷೆ), ಬಾಬು ಕೊರಗ ಪಾಂಗಾಳ (ಕೊರಗ ಭಾಷೆ) ಮಂಜುನಾಥ್ ಗುಂಡ್ಮಿ(ಕುಂದಾಪುರ ಕನ್ನಡ), ಜ್ಯೋತಿ ರವಿರಾಜ್ (ಹವ್ಯಕ ಕನ್ನಡ), ಆಕೃತಿ ಭಟ್ ( ಶಿವಳ್ಳಿ ತುಳು), ಡಾ.ಪ್ಲೇವಿಯಾ ಕ್ಯಾಸ್ಟಲಿನೋ (ಕೊಂಕಣಿ), ರಾಜನ್ ಮುನಿಯೂರು( ಮಲಯಾಳ), ಸಿಯಾನ ಬಿ.ಎಂ.(ಬ್ಯಾರಿ), ಫೆಲ್ಸಿ ಲೊಬೋ ದೇರೆಬೈಲ್ (ಕೊಂಕಣಿ), ಶರ್ಮಿಳಾ ಬಜಕೂಡ್ಳು(ಮರಾಟಿ), ಶ್ರೀನಿವಾಸ ಪೆರಿಕ್ಕಾನ(ಕರಾಡ)ಮತ್ತು ಗೋವಿಂದ ದಾಮ್ಲೆ ಸ್ವರಚಿತ ಕವನ ವಾಚಿಸಿದರು.

ತುಳು ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಟಿ ಶೆಟ್ಟಿ ,ಕಾರ್ಯದರ್ಶಿ ಯಶೋಧ ಮೋಹನ್, ತುಳು ಪರಿಷತ್ ಅಧ್ಯಕ್ಷ ಸುಭೋದಯ ಆಳ್ವ, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮಣ್ಣ

ಕೋಶಾಧಿಕಾರಿ ಗಣೇಶ್ ಪೂಜಾರಿ, ಉಪಾಧ್ಯಕ್ಷರಾದ ಸುಮತಿ ಹೆಗ್ಡೆ ಹಾಗೂ ಚಂದ್ರಕಲಾ ರಾವ್ , ಪದಾಧಿಕಾರಿಗಳಾದ ಜಿನೇಶ್ ಪ್ರಸಾದ್ , ಉಮರ್ ಕುಂಞಿ ಸಾಲೆತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಉಪಾಧ್ಯಕ್ಷೆ ಅರುಣಾ ನಾಗರಾಜ್ ಸ್ವಾಗತಿಸಿದರು. ತುಳು ಅಕಾ ಡೆಮಿ ಸದಸ್ಯ ನಾಗೇಶ್ ಉದ್ಯಾವರ ವಂದಿಸಿದರು. ಮಾಜಿ ಸದಸ್ಯ ಡಾ. ವಾಸುದೇವ ಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News