‘ಸೇ ನೋ ಟು ಡ್ರಗ್ಸ್’ ವಾಕಥಾನ್| ಡ್ರಗ್ಸ್ ವಿರುದ್ಧ ವಿದ್ಯಾರ್ಥಿಗಳಿಂದ ದಿಟ್ಟ ಸಂದೇಶ: ಸಿದ್ಧಾರ್ಥ್ ಗೋಯಲ್

Update: 2024-10-18 11:49 GMT

ಮಂಗಳೂರು: ‘ಸೇ ನೋ ಟು ಡ್ರಗ್ಸ್’ ವಾಕಥಾನ್‌ನಲ್ಲಿ ಐದು ಸಾವಿರಕ್ಕೂ ಅಧಿಕ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸಮಾಜದ ಕುರಿತಾಗಿನ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೆ, ಡ್ರಗ್ಸ್ ವಿರುದ್ಧದ ಅಭಿಯಾನಕ್ಕೆ ಪೂರಕವಾಗಿ ದಿಟ್ಟ ಸಂದೇಶವನ್ನು ಮಂಗಳೂರಿನಲ್ಲಿ ನೀಡಿದ್ದಾರೆ ಎಂದು ಡಿಸಿಪಿ ಸಿದ್ಧಾರ್ಥ್ ಗೋಯಲ್ ಹೇಳಿದ್ದಾರೆ.

ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯ, ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್, ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾದ ‘ಸೇ ನೋ ಟು ಡ್ರಗ್ಸ್’ ವಾಕಥಾನ್‌ನ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಬಳಿಕ ಅವರು ಮಾತನಾಡಿದರು.

ಡ್ರಗ್ಸ್ ಮುಕ್ತ ಮಂಗಳೂರು ಘೋಷಣೆಯೊಂದಿಗೆ ನಡೆಯುತ್ತಿರುವ ಅಭಿಯಾನದಡಿ ಇದು ನಿಜವಾದ ಹೋರಾಟವಾಗಿದ್ದು, ನಿರಂತರವಾಗಿ ಮುಂದುವರಿಯಬೇಕಿದೆ. ಡ್ರಗ್ಸ್ ಬಳಕೆದಾರರ ಮೇಲೆ ಪ್ರಕರಣ ದಾಖಲಿಸುವುದು ಸುಲಭ. ಆದರೆ ಅದ ರಿಂದ ಅವರ ಜೀವನ ಹಾಳಾಗುತ್ತದೆ. ಅದಕ್ಕಾಗಿ ಜಾಗೃತಿ ಅಗತ್ಯವಾಗಿದೆ. ಈ ಡ್ರಗ್ಸ್ ಚಟ ಯಾವಾಗ ಆರಂಭವಾಗಿ ಚಟವಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಲಾಗದು. ವಿದ್ಯಾರ್ಥಿ ವಲಯ ಖುದ್ದಾಗಿ ಮತ್ತು ತಮ್ಮ ಸ್ನೇಹಿತರು, ಕುಟುಂಬ ವಲಯದಲ್ಲಿ ಜಾಗೃತಿ ಮೂಡಿಸುವುದು ಬಹುಮುಖ್ಯವಾಗಿದೆ ಎಂದು ಅವರು ಹೇಳಿದರು.

‘ಸೇ ನೋ ಟು ಡ್ರಗ್ಸ್’ ಎಂಬ ಘೋಷಣೆಯೊಂದಿಗೆ, ಬಿಷಪ್ ರೆ.ಫಾ. ಡಾ. ಪೀಟರ್ ಪೌಲ್ ಸಲ್ಡಾನಾ ಅವರ ಮಾರ್ಗ ದರ್ಶನದಲ್ಲಿ ಆಯೋಜಿಸಲಾದ ವಾಕಥಾನ್‌ಗೆ ಸಂತ ಅಲೋಶಿಯಸ್ ಮೈದಾನದಲ್ಲಿ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ರೆಕ್ಟರ್ ರೆ.ಫಾ. ಮೆಲ್ವಿನ್ ಪಿಂಟೊ ಚಾಲನೆ ನೀಡಿದರು.

ಡ್ರಗ್ಸ್ ವಿರುದ್ಧದ ಘೋಷಣೆಯಿಂದ ಕೂಡಿದ ಭಿತ್ತಿಪತ್ರಗಳನ್ನು ಹಿಡಿದು ಸಹಸ್ರಾರು ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸಿದ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಸಮಾವೇಶಗೊಂಡರು.

ಅಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಡಿಸಿಪಿ ದಿನೇಶ್ ಕುಮಾರ್, ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಡ್ರಗ್ಸ್ ವಿರೋಧಿ ಅಭಿಯಾನದ ಸಂಯೋಜಕ ಲೂವಿ ಜೆ. ಪಿಂಟೋ, ಸೈಂಟ್ ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿಯ ಕುಲಪತಿ ರೆ.ಫಾ. ಡಾ. ಪ್ರವೀಣ್ ಮಾರ್ಟಿಸ್, ಡ್ರಗ್ಸ್ ತಡೆ ಸೊಸೈಟಿ ನೋಡೆಲ್ ಅಧಿಕಾರಿ ಡಾ. ರೋಶನ್ ಮೊಂತೆರೋ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್,ಕ್ಯಾಥಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಪ್ರವೀಣ್ ಲಿಯೋ ಲಸ್ರಾದೋ, ಜಾನ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡಾ. ಶಿವಶಂಕರ್ ವಂದಿಸಿದರು.

ಕ್ರೈಸ್ತ ಶಿಕ್ಷಣ ಮಂಡಳಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಜತೆಗೆ ಕೆನರಾ, ಶ್ರೀನಿವಾಸ ಯುನಿವರ್ಸಿಟಿ, ಎಸ್‌ಡಿಎಂ ಕಾಲೇಜು, ಬೆಸೆಂಟ್, ರೋಶನಿ ನಿಲಯ, ಶ್ರೀದೇವಿ ಕಾಲೇಜು, ಶಾರದಾ ಪಿಯುಕಾಲೇಜು, ಮಹಿಳಾ ಸರಕಾರಿ ಕಾಲೇಜು ಬಲ್ಮಠ, ಸೈಂಟ್ ಆಗ್ನೆಸ್ ಕಾಲೇಜು, ಮಿಲಾಗ್ರಿಸ್, ಸೈಂಟ್ ರೇಮಂಡ್ಸ್ ಪದುವಾ ಮೊದಲಾದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ‘ಸೇ ನೋ ಟು ಡ್ರಗ್ಸ್’ ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದರು. ಸಂತ ಅಲೋಶಿಯಸ್ ಕಾಲೇಜು ಮೈದಾನ ದಿಂದ ನೆಹರೂ ಮೈದಾನದವರೆಗೆ ನಡೆದ ವಾಕಥಾನ್ ಸಂದರ್ಭ ಸಂಚಾರ ವ್ಯವಸ್ಥೆ ಸುಗಮಗೊಳಿಸುವಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡಿದರು.







 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News