ಮೂಡುಬಿದಿರೆ: ಮಹಿಳೆಯ ಚಿನ್ನದ ಸರ ಕಳವು ಪ್ರಕರಣ; ಆರೋಪಿ ಸೆರೆ
ಮೂಡುಬಿದಿರೆ: ಪರಿಚಯಸ್ಥನಂತೆ ನಟಿಸಿ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕೆಂಪುಗುಡ್ಡೆ, ಕಸವಿತ್ತಲ್ ಮನೆ ನಿವಾಸಿ ಸುರೇಶ್ ಆಲಿಯಾಸ್ ಸಂತೋಷ (60) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತನಿಂದ 2.50 ಲಕ್ಷ ರೂ. ಮೌಲ್ಯದ 36 ಗ್ರಾಂ ತೂಕದ 2 ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುಂದರಿ ಪೂಜಾರಿ ಎಂಬವರು ತನ್ನ ಮಗಳ ಮನೆಗೆ ಹೋಗಲೆಂದು ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ವೇಳೆ ಅಪರಿಚಿತನೋರ್ವ ಬಂದು ಪರಿಚಯಸ್ಥನಂತೆ ಮಾತನಾಡಿ, ತಮ್ಮ ಕೊರಳಿನ್ನಲ್ಲಿರುವಂತ ಸರ ಮಾಡಲಿದೆ ಎಂದು ಹೇಳಿ ಅವರ ಕುತ್ತಿಗೆಯಕಲ್ಲಿದ್ದ 2 ಪವನ್ ತೂಕದ ಸರವನ್ನು ಕಳವುಗೈದು ಪರಾರಿಯಾಗಿದ್ದ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿದ ಪೊಲೀಸರು, 2023ರಲ್ಲಿ ಕಾರ್ಕಳ ತಾಲೂಕು ಕಸಬ, ಮಣ್ಣು ಗೋಪುರದ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯನ್ನು ವಂಚನೆ ಮಾಡಿ ಪಡೆದಿದ್ದ ಒಂದುವರೇ ಪವನ್ ತೂಕದ ಹವಳ ಇರುವ ಚಿನ್ನದ ಸರ, ಸುಂದರಿ ಪೂಜಾರಿಯವರಿಂದ ಕಳವುಗೈದಿದ್ದ ಚಿನ್ನದ ಸರ ಸೇರಿ ಒಟ್ಟು 36 ಗ್ರಾಂ ತೂಕದ 2 ಚಿನ್ನದ ಸರಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಆರೋಪಿಯ ವಿರುದ್ಧ ದ.ಕ ಜಿಲ್ಲೆ, ಪುತ್ತೂರು ಟೌನ್ ಪೊಲೀಸ್ ಠಾಣೆಯ ಪ್ರಕರಣ ಒಂದರಲ್ಲಿ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ, ಮಾನ್ಯ ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೊಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್. ಕೆ ಅವರ ನಿರ್ದೇಶನದಂತೆ, ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಅವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಕೃಷ್ಣಪ್ಪ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಯಾದ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಅವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.