‘ಕಲಾ ಪರ್ಬ’ ಇದರ ಲಾಂಛನ ಮತ್ತು ಕರಪತ್ರ ಬಿಡುಗಡೆ
ಮಂಗಳೂರು: ಜನವರಿ 11 ಮತ್ತು 12 ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಶರಧಿ ಪ್ರತಿಷ್ಟಾನವು ಆಯೋಜಿಸುವ ‘ಕಲಾ ಪರ್ಬ ’ ಇದರ ಲಾಂಛನ ಮತ್ತು ಕರಪತ್ರವನ್ನು ಗುರುವಾರ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರು ಬಿಡುಗಡೆ ಗೊಳಿಸಿದರು.
ಕಲಾ ಪರ್ಬದಲ್ಲಿ ಸುಮಾರು 200 ಮಳಿಗೆಗಳಲ್ಲಿ ಕಲಾಕೃತಿ, ಛಾಯಾ ಚಿತ್ರ 30 ಮಳಿಗೆಗಳಲ್ಲಿ ಶಿಲ್ಪ ಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇರಲಿದೆ. ಕಲಾಕೃತಿಗಳನ್ನು ಮಿತ ದರದಲ್ಲಿ ಖರೀದಿಸಬಹುದಾಗಿದೆ.
ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಮತ್ತು ಇದರ ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶವನ್ನು ಇಟ್ಟುಕೊಂಡು ಈ ಕಲಾ ಪರ್ಬವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಮೂರ್ತ - ಅಮೂರ್ತ, ಹಿರಿಯ - ಕಿರಿಯ ಎಂಬ ಯಾವುದೇ ಅಂತರ, ಬೇಧ ಇಲ್ಲದೇ ಎಲ್ಲಾ ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಕಲಾ ವೀಕ್ಷಕರಿಗೆ, ಕಲಾಭಿಮಾನಿಗಳಿಗೆ ಕಲಾಕೃತಿಗಳ ಪ್ರದರ್ಶನ, ಮಾರಾಟ ಮತ್ತು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸುವುದು ಪ್ರಮುಖವಾಗಿರುತ್ತದೆ. ಚಿತ್ರ ಕಲೆ, ಶಿಲ್ಪಕಲೆ ಮತ್ತು ನೃತ್ಯ ಪ್ರಕಾರಗಳ ವಿವಿಧ ರೂಪಗಳ ಅಭಿವ್ಯಕ್ತ ಹರಿವು, ಸೆಳವುಗಳ ಮೂಲಕ ಮೇಳದ ರೂಪದಲ್ಲಿ ಕಲಾ ಪರ್ಬ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಲಾವಿದರಾದ ಕೋಟಿ ಪ್ರಸಾದ್ ಆಳ್ವ, ರಮೇಶ್ ನಾಯಕ್, ಶ್ರೀನಿವಾಸ್‌ನಾಯಕ್, ಪಿ.ಬಿ. ಹರೀಶ್ ರೈ, ಮಮತಾ ಗಟ್ಟಿ, ಪುನಿಕ್ ಶೆಟ್ಟಿ ಉಪಸ್ಥಿತರಿದ್ದರು. ಕಲಾವಿದ ದಿನೇಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.