ಮಂಗಳೂರು| ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲುಶಿಕ್ಷೆ, ದಂಡ

Update: 2024-11-21 16:06 GMT

ಮಂಗಳೂರು: ಟಿವಿ ನೋಡಲು ಬರುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. 2 ಫೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ಕೆ.ಸುಧೀರ್ (27) ಶಿಕ್ಷೆಗೊಳಗಾದ ಆರೋಪಿ.

ಸುಧೀರ್ ವಾಸವಾಗಿದ್ದ ಮನೆಗೆ 13 ವರ್ಷದ ಬಾಲಕಿ ಟಿವಿ ನೋಡಲು ಬರುತ್ತಿದ್ದು, 2021 ಡಿಸೆಂಬರ್ ಕೊನೆ ವಾರದಲ್ಲಿ ಬಾಲಕಿಯನ್ನು ಅಂಗಡಿಗೆಂದು ಕರೆದೊಯ್ದು ವಾಸವಿಲ್ಲದ ಆರೋಪಿಯ ಅಜ್ಜಿ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ತಾಯಿಗೆ ಹೇಳುತ್ತೇನೆ ಎಂದು ಬಾಲಕಿ ಹೇಳಿದಾಗ ನೀನೇ ನನ್ನ ಬಳಿ ಬಂದದ್ದು ಎಂದು ಹೇಳಿ ನಿನ್ನ ವಿರುದ್ಧ ಪೊಲೀಸ್ ದೂರು ಕೊಡುತ್ತೇನೆ ಎಂದು ಹೆದರಿಸಿದ್ದ. ಬಳಿಕ ರಜಾ ದಿನಗಳಲ್ಲಿ ಬಾಲಕಿ ಟಿವಿ ನೋಡಲು ಹೋದಾಗ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಸುಧೀರ್ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಪರಿಣಾಮವಾಗಿ 2022 ಆಗಸ್ಟ್ ತಿಂಗಳಲ್ಲಿ ಬಾಲಕಿ ಗರ್ಭಿಣಿಯಾಗಿದ್ದಳು.

ಪತ್ನಿ ಎಂದು ಗರ್ಭಪಾತ ಮಾಡಿಸಿದ್ದ: ಬಾಲಕಿ ಗರ್ಭಿಣಿಯಾದ ವಿಷಯ ಅರಿತ ಆರೋಪಿ ಕೆ.ಸುಧೀರ್ ತನ್ನ ತಾಯಿಗೆ ವಿಷಯ ತಿಳಿಸಿ ಚಿಕ್ಕಮಗಳೂರು ಕಡೆ ಎಲ್ಲಾದರೂ ಗರ್ಭಪಾತ ಮಾಡಿಸಿದರೆ ಉತ್ತಮ ಎಂದು ಮನಗಂಡು ಆಸ್ಪತ್ರೆಯವರಿಗೆ ತನ್ನ ಪತ್ನಿ ಎಂದು ಬಿಂಬಿಸಲು ಆಕೆಗೆ ಕಾಲುಂಗುರ, ಬೆಳ್ಳಿಯ ಕರಿಮಣಿ ಸರ ಹಾಕಿಸಿ ಮದುಮಗಳಂತೆ ಅಲಂಕಾರ ಮಾಡಿಸಿ ಫೋಟೊ ತೆಗೆಸಿದ್ದ. 2022 ಡಿ.17ರಂದು ಚಿಕ್ಕಮಗಳೂರಿನ ಆಸ್ಪತ್ರೆಗೆ ತೆರಳಿ ಬಾಲಕಿಯನ್ನು ಪತ್ನಿ ಎಂದು ವೈದ್ಯರಿಗೆ ತಿಳಿಸಿ ಗರ್ಭಪಾತ ಮಾಡಿಸಿದ್ದ ಎಂದು ತಿಳಿದು ಬಂದಿದೆ.

ಆರೋಪಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಮತ್ತು ಸತ್ಯನಾರಾಯಣ ಕೆ. ಅವರು ತನಿಖೆ ನಡೆಸಿ, ಸುಧೀರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. 2 ಫೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 24 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದೆ. 62 ದಾಖಲೆಗಳನ್ನು ಗುರುತಿಸಲಾಗಿದೆ. ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯ ಮತ್ತು ವಾದ ಪ್ರತಿವಾದ ಆಲಿಸಿ ಆರೋಪಿ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಶಿಕ್ಷೆ ಪ್ರಕಟಿಸಿದ್ದಾರೆ.

ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೆ.ಸುಧೀರ್ ಗೆ ಪೋಕ್ಸೋ ಕಾಯ್ದೆಯಂತೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿದೆ. ಸಾಕ್ಷ್ಯ ನಾಶ ಮಾಡಿದ ಅಪರಾಧಕ್ಕೆ 3 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಹಣ 50 ಸಾವಿರ ರೂ. ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ದಂಡ ಪ್ರಕ್ರಿಯೆ ಸಂಹಿತೆಯ ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಕೆ.ಬದರಿನಾಥ ನಾಯರಿ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News