ಮಂಗಳೂರು| ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಮನೆಗೆ ಲೋಕಾಯುಕ್ತ ದಾಳಿ
ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಅವರ ಮನೆ ಹಾಗೂ ಕಚೇರಿ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಕೃಷ್ಣವೇಣಿ ಅವರು ಇರುವ ಮಂಗಳೂರಿನ ವೆಲೆನ್ಸಿಯಾದ ಫೆಡ್‌ರೋಸ್ ಎನ್‌ಕ್ಲೇವ್ ವಸತಿ ಸಮುಚ್ಚಯದ ಮನೆ ಹಾಗೂ ಮಲ್ಲಿಕಟ್ಟೆಯ ಜುಗಲ್ ಟವರ್ಸ್‌ನಲ್ಲಿರುವ ಇಲಾಖೆ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.
ಕೃಷ್ಣವೇಣಿ ಅವರು ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾಗ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆಂಬ ಆರೋಪಿಸಿ ಚಿಕ್ಕಬಳ್ಳಾಪುರ ಲೋಕಾಯುಕ್ತಕ್ಕೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಎಂ.ಎ.ನಟರಾಜ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.
ದಾಳಿಯ ವೇಳೆ ಅಪಾರ ಪ್ರಮಾಣದಲ್ಲಿ ನಗ-ನಗದು ಆಸ್ತಿಪತ್ರಗಳು ಪತ್ತೆಯಾಗಿದ್ದು ಇವುಗಳನ್ನು ಚಿಕ್ಕ ಬಳ್ಳಾಪುರ ಲೋಕಾ ಯುಕ್ತ ಪೊಲೀಸರ ವಶಕ್ಕೆ ನೀಡಲಾಗಿದೆ. ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಮೂರು ವಾಹನಗಳಲ್ಲಿ ಬೆಳಗ್ಗೆ 6 ಗಂಟೆಗೆ ಆಗಮಿಸಿದ್ದ ಲೋಕಾಯುಕ್ತ ಪೊಲೀಸರು ಮೊದಲು ಕೃಷ್ಣವೇಣಿ ಅವರ ಮನೆಗೆ ದಾಳಿ ನಡೆಸಿದರು. ಅನಂತರ ಕಚೇರಿಗೂ ದಾಳಿ ನಡೆಸಿದರು ಎಂದು ತಿಳಿದು ಬಂದಿದೆ.
ಸಂಜೆ 4: 30ರ ವರೆಗೆ ಮನೆ ಹಾಗೂ ಕಚೇರಿಯಲ್ಲಿ ಪರಿಶೀಲನೆ ನಡೆದಿದೆ. ಕೃಷ್ಣವೇಣಿ ಅವರು ಎರಡು ತಿಂಗಳ ಹಿಂದೆ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾವಣೆಯಾಗಿ ಆಗಮಿಸಿದ್ದರು.