ಎಸ್ ಎಂ ಸಯ್ಯದ್ ಖಲೀಲ್ ನಿಧನ ತುಂಬಲಾರದ ನಷ್ಟ: ಸ್ಪೀಕರ್ ಯು.ಟಿ ಖಾದರ್

Update: 2024-11-21 13:44 GMT

ಯು.ಟಿ ಖಾದರ್

ಮಂಗಳೂರು: ಎಸ್ ಎಂ ಸಯ್ಯದ್ ಖಲೀಲ್ ಅವರು ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಅಮೋಘ ಸಾಧನೆಯ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದವರು. ಅದರ ಜೊತೆಜೊತೆಗೆ ಸಾಮಾಜಿಕ, ಧಾರ್ಮಿಕ ಹಾಗು ಶೈಕ್ಷಣಿಕ ರಂಗಗಳಲ್ಲಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನ ನಿಜಾರ್ಥದಲ್ಲಿ ತುಂಬಲಾರದ ನಷ್ಟವಾಗಿದೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು.

ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಹಾಗೂ ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್ ನ ಅಧ್ಯಕ್ಷ ಎಸ್ ಎಂ ಸಯ್ಯದ್ ಖಲೀಲ್ (86) ಅವರು ಬುಧವಾರ ತಡರಾತ್ರಿ ದುಬೈ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಭಟ್ಕಳದ ಪ್ರಪ್ರಥಮ ಚಾರ್ಟರ್ಡ್ ಅಕೌಂಟೆಂಟ್ ಗಳಲ್ಲಿ ಒಬ್ಬರಾದ ಸಯ್ಯದ್ ಖಲೀಲ್ ಅವರು ' ಸಿ ಎ ಖಲೀಲ್ ' ಎಂದೇ ಚಿರಪರಿಚಿತರಾಗಿದ್ದ ಖ್ಯಾತ ಅನಿವಾಸಿ ಕನ್ನಡಿಗರಲ್ಲೊಬ್ಬರು. ದುಬೈ ಸಹಿತ ಗಲ್ಫ್ ದೇಶಗಳಲ್ಲಿ ಕನ್ನಡ ಹಾಗೂ ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯ ಕಂಪು ಹರಡುವಲ್ಲಿ ಮಹತ್ವದ ಕೊಡುಗೆ ನೀಡಿದವರು. ನೂರಾರು ಯುವಜನರಿಗೆ ಉದ್ಯೋಗ ಪಡೆಯಲು ನೆರವಾದವರು. ಭಟ್ಕಳ , ಮಂಗಳೂರು ಸಹಿತ ಹತ್ತಾರು ಕಡೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘ ಸಂಸ್ಥೆಗಳಿಗೆ ಪೋಷಕರಾಗಿ, ಪದಾಧಿಕಾರಿಯಾಗಿ ಆಸರೆಯಾದವರು.

ಅವರು ಭಟ್ಕಳದ ಅಂಜುಮನ್ ಹಾಮಿ ಎ ಮುಸ್ಲಿಮೀನ್, ರಾಬಿತಾ ಸೊಸೈಟಿ, ಸಹಿತ ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಹತ್ತಾರು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಖ್ಯಾತ ರಾಜಕೀಯ, ಧಾರ್ಮಿಕ ನಾಯಕರ ಜೊತೆ ಆತ್ಮೀಯ ಸಂಬಂಧವನ್ನು ಎಸ್ ಎಂ ಸಯ್ಯದ್ ಖಲೀಲ್ ಅವರು ಹೊಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News