'ಮನೆ ಬಾಗಿಲಿಗೆ ಔಷಧಿ ವಿತರಣೆ ಅನುಮತಿ' ಹಿಂಪಡೆಯಲು ಔಷಧ ವ್ಯಾಪಾರಿಗಳ ಸಂಘ ಮನವಿ
ಮಂಗಳೂರು, ಡಿ.27: ಕೋವಿಡ್ ಸಂದರ್ಭದಲ್ಲಿ ಔಷಧಿಗಳನ್ನು ಮನೆ ಬಾಗಿಲಿಗೆ ವಿತರಿಸಲು ನೀಡಲಾಗಿದ್ದ ವಿಶೇಷ ಅನುಮತಿಯನ್ನು ಅಕ್ರಮ ಆನ್ ಲೈನ್ ವೇದಿಕೆಗಳು ದುರುಪಯೋಗ ಮಾಡುತ್ತಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಈ ಅನುಮತಿಯನ್ನು ತಕ್ಷಣವೇ ಹಿಂಪಡೆಯುವಂತೆ ಅಖಿಲ ಭಾರತ ಔಷಧ ಮತ್ತು ಔಷಧಿ ವ್ಯಾಪಾರಿಗಳ ಸಂಘ (ಎಐಒಸಿಡಿ) ಕೇಂದ್ರ ಸರಕಾರವನ್ನು ಒತ್ತಾಯಿಸಿ ಮನವಿ ಸಲಿಲಸಿದೆ.
ಎಐಒಸಿಡಿ ಮತ್ತು ರಾಜ್ಯ ಮತ್ತು ಭಾರತಾದ್ಯಂತದ ಎಲ್ಲಾ ಔಷಧಿ ಮಾರಾಟಗಾರರು ಹಾಗೂ ವಿತರಕರನ್ನು ಪ್ರತಿನಿಧಿಸುವ ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳಿಗೆ ಮೂರನೇ ಸಲ ಪತ್ರ ಬರೆದಿದ್ದು, ಕೋವಿಡ್ ವೇಳೆ ಜಾರಿಗೊಂಡಿದ್ದ ಅಧಿಸೂಚನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದೆ.
ಆನ್ ಲೈನ್ ಅನುಮತಿಗೆ ಸಂಬಂಧಿಸಿ ಅಧಿಸೂಚನೆಯನ್ನು 2020ರ ಮಾರ್ಚ್ನಲ್ಲಿ ಪ್ರಕಟಿಸಲಾಗಿತ್ತು. ತುರ್ತು ಪರಿಸ್ಥಿತಿಯಡಿಯಲ್ಲಿ ಔಷಧಿ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಯಂತ್ರಿಸಲು ಡ್ರಗ್ಸ್ ಕಾಯ್ದೆಯಡಿ ಕೆಲ ಷರತ್ತುಗಳೊಂದಿಗೆ ಔಷಧಿಗಳನ್ನು ಮನೆಬಾಗಿಲಿಗೆ ವಿತರಿಸುವುದಕ್ಕೆ ಅನುಮತಿ ನೀಡಲಾಗಿತ್ತು. ಇದರಡಿ, ಔಷಧಗಳ ಮಾರಾಟಕ್ಕಾಗಿ ಪ್ರಿಸ್ಕಿಪ್ಷನ್ ಮೇಲೆ ಮುದ್ರಣ ಅಗತ್ಯ (ನಿಯಮ 65) ತಾತ್ಕಾಲಿಕವಾಗಿ ನಿರ್ಲಕ್ಷಿಸಲಾಗಿತ್ತು.
ಈ ಅಧಿಸೂಚನೆಯ ಪ್ರಮುಖ ಉದ್ದೇಶವು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ಔಷಧಿ ವ್ಯಾಪಾರಿಗಳ ಮೂಲಕ ಔಷಧಿಗಳನ್ನು ವಿತರಿಸುವುದಾದರೂ, ಇತ್ತೀಚಿಗೆ ಸ್ವಿಗ್ಗಿ ಮತ್ತು ಇತರ ಡಿಜಿಟಲ್ ವೇದಿಕೆಗಳು ಔಷಧಿಗಳನ್ನು ಮನೆಬಾಗಿಲಿಗೆ ವಿತರಿಸಲು ಇದನ್ನು ದುರುಪಯೋಗ ಮಾಡುತ್ತಿವೆ ಎಂದು ಎಐಒಸಿಡಿಯ ಅಧ್ಯಕ್ಷ ಜೆ.ಎಸ್. ಶಿಂಧೆ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ ಸಿಂಘಲ್ ಆಕ್ಷೇಪಿಸಿದ್ದಾರೆ.
ಈ ಆನ್ಲೈನ್ಗಳ ಮೂಲಕ ಪ್ರಿಸ್ಕಿಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಸ್ವಯಂ ಚಿಕಿತ್ಸಾ ಔಷಧಿಗಳು ದುರುಪಯೋಗ ಮತ್ತು ಆಂಟಿಮೈಕ್ರೋಬಿಯಲ್ ಪ್ರತಿರೋಧದಂತಹ ಗಂಭೀರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಎಲ್ಲಾ ಅಕ್ರಮ ವೇದಿಕೆಗಳು ರೋಗಿಗಳ ಆರೋಗ್ಯ ಸುರಕ್ಷತೆ ಕಡೆಗಣಿಸಿ, ತಮ್ಮ ಲಾಭ ಮಾತ್ರ ಗಮನದಲ್ಲಿಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಈ ಅಧಿಸೂಚನೆಯ ಮೂಲ ಉದ್ದೇಶವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ಲೈಸೆನ್ಸ್ ಹೊಂದಿರುವ ಸ್ಥಳೀಯ ಔಷಧಿ ವ್ಯಾಪಾರಿಗಳಿಂದ ಔಷಧಿಗಳ ವಿತರಣೆಯನ್ನು ಅನುಮತಿಸುವುದಾಗಿತ್ತು. ಆದರೆ, ಈ ಎಲ್ಲಾ ಆನ್ ಲೈನ್ ವೇದಿಕೆಗಳು ತಮ್ಮ ಅಗತ್ಯತೆಗೆ ಅನುಗುಣವಾಗಿ ಔಷಧಿ ವಿತರಣೆಯ ನಿಯಮಗಳನ್ನು ಅವಗಣಿಸುತ್ತಿವೆ. ಇದು ಸಾರ್ವಜನಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದ.ಕ. ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಪರವಾಗಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಹಾಗೂ ಕಾರ್ಯದರ್ಶಿ ಡಾ. ಎ.ಕೆ. ಜಮಾಲ್ ಪತ್ರಿಕಾ ಪ್ರಕಟನೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.