ಮುಳುಗು ತಜ್ಞ ಈಶ್ವರ್ ಮಲ್ಪೆಗೆ 'ಮೂಲತ್ವ ವಿಶ್ವ ಪ್ರಶಸ್ತಿ': ಡಿ.29ರಂದು ಪ್ರದಾನ

Update: 2024-12-27 09:40 GMT

ಮಂಗಳೂರು, ಡಿ.27: ನಗರದ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ 10ನೇ ವರ್ಷದ ಮೂಲತ್ವ ವಿಶ್ವ ಪ್ರಶಸ್ತಿಗೆ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಫಲಕದ ಜತೆಗೆ ಒಂದು ಲಕ್ಷದ ಒಂದು ರೂಪಾಯಿ ನಗದು ನೀಡಲಾಗುತ್ತದೆ ಎಂದು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ಹೇಳಿದರು.

ಅವರು ಶುಕ್ರವಾರ ನಗರದ ಪ್ರೆಸ್ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕೊಡಿಯಾಲ್ ಬೈಲ್ನ ಶಾರದಾ ವಿದ್ಯಾಲಯದ ಅಡಿಟೋರಿಯಂನಲ್ಲಿ ಡಿ.29ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.

ಮನಪಾ ಮೇಯರ್ ಮನೋಜ್ ಕುಮಾರ್, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎಚ್.ಎನ್. ಆಂಜನೇಯಪ್ಪ, ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಸಮಾಜ ಸೇವಕರಾದ ರವಿ ಕಟಪಾಡಿ, ದೈಜಿ ವರ್ಲ್ಡ್ ಮೀಡಿಯಾ ಸಂಸ್ಥಾಪಕ ವಾಲ್ಟರ್ ನಂದಳಿಕೆ ಹಾಗೂ ಮೊಗವೀರ ಮಹಾಜನ ಸಭಾದ ಉಪಾಧ್ಯಕ್ಷ ಮೋಹನ ಬೇಂಗ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಕಲ್ಪನಾ ಕೋಟ್ಯಾನ್, ಶೈನಿ, ಅಕ್ಷತಾ ಕದ್ರಿ, ಲಕ್ಷ್ಮೀಶ ಪಿ. ಕೋಟ್ಯಾನ್ ಹಾಗೂ ಸದಸ್ಯ ಮಹೇಶ್ ಅಮೀನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News