ಮುಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶ್ರೀಧರ ಆಯ್ಕೆ

Update: 2025-01-01 13:57 GMT

ಮಂಗಳೂರು: ಮುಲ್ಕಿ ತಾಲೂಕು ಎರಡನೆಯ ಸಾಹಿತ್ಯ ಸಮ್ಮೇಳನ ಫೆ.೮ರಂದು ಕಿನ್ನಿಗೋಳಿ ಐಕಳದ ಪಾಂಪೈ ಕಾಲೇಜಿನಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಶ್ರೀಧರ ಡಿ.ಎಸ್. ಆಯ್ಕೆಯಾಗಿದ್ದಾರೆ.

ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತ, ಯಕ್ಷಗಾನ ವಿಮರ್ಶಕ, ಕಥೆಗಾರ, ಕವಿ, ಕಾದಂಬರಿಕಾರರಾದ ಶ್ರೀಧರ ಮೂರು ದಶಕಗಳ ಕಾಲ ಕಿನ್ನಿಗೋಳಿಯ ಪಾಂಪೈ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. 2020ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿ ಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಕಿನ್ನಿಗೋಳಿಯಲ್ಲಿ ಸಮಾನ ಆಸಕ್ತ ಗೆಳೆಯರೊಂದಿಗೆ ಸೇರಿ ತಾಳಮದ್ದಲೆಗಾಗಿ ಯಕ್ಷಲಹರಿ ಎಂಬ ಸಂಸ್ಥೆಯನ್ನು ರೂಪಿಸಿದ್ದರು. ಶಿವಮೊಗ್ಗದಲ್ಲಿ ನಡೆದ ೧೧ನೇ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ೪೦ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳ ರಚಿಸಿದ್ದಾರೆ. ಬಿಡಿ ಪದ್ಯಗಳನ್ನೂ ಪರಿಗಣಿಸಿದರೆ ಶ್ರೀಧರ ಐದು ಸಾವಿರಕ್ಕೂ ಹೆಚ್ಚಿನ ಯಕ್ಷಗಾನ ಪದ್ಯಗಳನ್ನು ರಚಿಸಿದ್ದಾರೆ.

ಮಂಗಳೂರು ಆಕಾಶವಾಣಿ ಇವರ ಪ್ರಸಂಗಗಳ ತಾಳಮದ್ದಲೆಗಳನ್ನು ಶ್ರೀಧರ ಯಕ್ಷಕಾವ್ಯ ಎಂಬ ಹೆಸರಿನಲ್ಲಿ ೨೯ ವಾರಗಳ ಕಾಲ ಸತತವಾಗಿ ಪ್ರಸಾರ ಮಾಡಿತ್ತು. ಯಕ್ಷಗಾನ ಪ್ರಸಂಗಕೋಶದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುಗಾಂತರ, ಅಸುರಗುರು ಶುಕ್ರಾಚಾರ್ಯ, ಪರಶುರಾಮ ಎಂಬ ಮೂರು ಬೃಹತ್ ಕಾದಂಬರಿಗಳು ಸೇರಿದಂತೆ, ಮಾತಿನ ಕಲೆ ತಾಳಮದ್ದಲೆ, ಬಸ್ಸು ಜಟಕಾ ಬಂಡಿ, ಜಡಭರತ, ಗೋ-ವಿಪ್ರ ಮೊದಲಾದ ಸಣ್ಣ ಕಾದಂಬರಿಗಳನ್ನು ನಾಡಿನ ಪ್ರಮುಖ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿವೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News