ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು: ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ಕಿರುಕುಳಕ್ಕೆ ಹೆದರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೀದರ್ ನ ಗುತ್ತಿಗೆದಾರ ಸಚಿನ್ ಪಂಚಾಳ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಸುದ್ದಿಗೋಷ್ಠಿ ಯಲ್ಲಿಂದು ಆಗ್ರಹಿಸಿದ್ದಾರೆ.
ಗುತ್ತಿಗೆದಾರ ಸಚಿನ್ ಅವರು 7 ಪುಟಗಳ ಡೆತ್ ನೋಟ್ ಬರೆದು ಅದನ್ನು ಸಾಮಾಜಿಕ ಜಾಲತಾಣದಲ್ಲೂ ಹಾಕಿದ್ದಾರೆ. ಅದರಲ್ಲಿ ಪ್ರಿಯಾಂಕ್ ಖರ್ಗೆ ಅವರ ಆಪ್ತರು ತನಗೆ ಮಾಡಿದ ಮಹಾ ಮೋಸ, ನೀಡಿದ ಚಿತ್ರಹಿಂಸೆ, ಅಲ್ಲದೇ ಸ್ವಾಮೀಜಿ ಯೊಬ್ಬರನ್ನು ಮತ್ತು ಬಿಜೆಪಿ ಮುಖಂಡ ಚಂದು ಪಾಟೀಲ, ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಸೇರಿದಂತೆ ಹಲವ ರನ್ನು ಸುಪಾರಿ ಕೊಟ್ಟು ಹತ್ಯೆ ಮಾಡುವ ಸಂಚಿನ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಈ ಎಲ್ಲಾ ಆರೋಪಗಳು ಸಚಿವ ಪ್ರಿಯಾಂಕ್ ಖರ್ಗೆಯವರ ಸುತ್ತವೇ ಗಿರಕಿ ಹೊಡೆಯುತ್ತಿದ್ದು ಈ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುವುದಾಗಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೆ.ಎಸ್ ಈಶ್ವರಪ್ಪನವರ ಪ್ರಕರಣ ಸೇರಿದಂತೆ ಸಣ್ಣಪುಟ್ಟ ವಿಷಯಕ್ಕೂ ಸಿದ್ದರಾಮಯ್ಯ ಆದಿಯಾಗಿ, ಪ್ರಿಯಾಂಕ ಖರ್ಗೆ ಸಹಿತ ಕಾಂಗ್ರೆಸ್ ನಾಯಕರು ಬೀದಿ ಬೀದಿಯಲ್ಲಿ ರಾಜೀನಾಮೆ ಕೊಡಿ ಎಂದು ಆರ್ಭಟಿಸು ತ್ತಿದ್ದರು. ಈಗ ಅವರ ಸರ್ಕಾರವೇ ಆರೋಪಿ ಸ್ಥಾನದಲ್ಲಿರುವಾಗ ಎಲ್ಲರೂ ಮೌನ ವಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಸಚಿನ್ ಪಡೆದಿದ್ದ ಗುತ್ತಿಗೆ ಕೆಲಸಗಳ ಬಾಕಿ ಉಳಿದಿರುವ ಹಣವನ್ನು ಪಾವತಿಸುವು ದರ ಜೊತೆಗೆ ಆ ಕುಟುಂಬಕ್ಕೆ ಸೂಕ್ತ ಪರಿಹಾರವನ್ನೂ ಘೋಷಿಸಬೇಕು, ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಹುದ್ದೆ ಯನ್ನು ನೀಡಬೇಕು, ಮತ್ತು ಈ ಅನ್ಯಾಯದ ಸಾವಿಗೆ ಕಾರಣರಾದ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳ ಬೇಕೆಂದು ಒತ್ತಾಯಿಸುವುದಾಗಿ ಶಾಸಕ ಕಾಮತ್ ತಿಳಿಸಿದ್ದಾರೆ
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಉಪಮೇಯರ್ ಭಾನುಮತಿ, ಪೂರ್ಣಿಮಾ, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.