ಕುಲಶೇಖರ ಚರ್ಚ್‌ನಲ್ಲಿ ಬೈಬಲ್ ಮಹಾ ಸಮ್ಮೇಳನಕ್ಕೆ ಚಾಲನೆ

ಮಂಗಳೂರು, ಮಾ.20: ಮಂಗಳೂರು ಕೆಥೋಲಿಕ್ ಧರ್ಮ ಕ್ಷೇತ್ರದ ಬೈಬಲ್ ಆಯೋಗ ಮತ್ತು ಕೆಥೋಲಿಕ್ ಕಾರಿಸ್ಮಾತಿಕ್ ಸೇವಾ ಸಂಚಲನ ವತಿಯಿಂದ ನಗರದ ಕುಲಶೇಖರ ಕೋರ್ಡೆಲ್ ಪವಿತ್ರ ಶಿಲುಬೆಯ ಚರ್ಚ್ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಬೈಬಲ್ ಮಹಾ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷ ಅ.ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಅದಕ್ಕೂ ಮೊದಲು ಚರ್ಚ್‌ನಿಂದ ಸಮ್ಮೇಳನದ ವೇದಿಕೆಗೆ ಬೈಬಲ್ ಮೆರವಣಿಗೆ ನಡೆಯಿತು. ಬೈಬಲ್‌ನಿಂದ ಆಯ್ದ ವಿಷಯಗಳ ಕುರಿತು ಪ್ರಬೋಧನೆ ನಡೆಯಿತು.
ಕರ್ನಾಟಕ ಪ್ರಾಂತೀಯ ಕ್ಯಾರಿಸ್ಮಾಟಿಕ್ ಸಂಚಾಲನದ ನಿರ್ದೇಶಕ ವಂ. ಫ್ರ್ಯಾಂಕ್ಲಿನ್ ಡಿಸೋಜ, ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ. ಡಾ. ಜೆ.ಬಿ. ಸಲ್ಡಾನ್ಹಾ, ರೋಯ್ ಕ್ಯಾಸ್ತಲಿನೊ, ಕ್ಯಾರಿಸ್ಮಾಟಿಕ್ ಸಂಚಾಲನದ ಸಂಚಾಲಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಚೇರ್‌ಮೆನ್ ಕೆವಿನ್ ಡಿಸೋಜ, ಕಾರ್ಯದರ್ಶಿ ಮೊಸ್ಸಂ ರೇಗೋ, ಚರ್ಚ್‌ನ ಉಪಾಧ್ಯಕ್ಷೆ ರೂತ್ ಕ್ಯಾಸ್ತಲಿನೊ, ಕಾರ್ಯ ದರ್ಶಿ ಅನಿಲ್ ಡೆಸಾ, ಬೈಬಲ್ ಆಯೋಗದ ಸಹ ಕಾರ್ಯದರ್ಶಿ ಲೆನನ್ ಜೋನ್ ಮಸ್ಕರೇನಸ್, ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂ. ವಿಜಯ್ ಮೊಂತೇರೊ, ಪಾವ್ಲ್ ಸೆಬಾಸ್ಟಿಯನ್, ನಿಶಿತ್ ಲೋಬೊ ಉಪಸ್ಥಿತರಿದ್ದರು.
ಕುಲಶೇಖರದ ಕೊರ್ಡೆಲ್ ಪವಿತ್ರ ಶಿಲುಬೆಯ ಚರ್ಚ್‌ನಲ್ಲಿ ಬಲಿಪೂಜೆ

ಮಂಗಳೂರು ಕೆಥೋಲಿಕ್ ಧರ್ಮಕ್ಷೇತ್ರದ ಬೈಬಲ್ ಆಯೋಗ ಮತ್ತು ಕೆಥೋಲಿಕ್ ಕಾರಿಸ್ಮಾತಿಕ್ ಸೇವಾ ಸಂಚಾಲನ ವತಿಯಿಂದ ಕುಲಶೇಖರದ ಕೊರ್ಡೆಲ್ ಪವಿತ್ರ ಶಿಲುಬೆಯ ಚರ್ಚ್‌ನಲ್ಲಿ ಗುರುವಾರ ಬಲಿಪೂಜೆ ನಡೆಯಿತು.
ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದ ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷ ಅ.ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬೈಬಲ್‌ನಲ್ಲಿರುವ ದೇವರ ವಾಕ್ಯ ನಮ್ಮ ಜೀವನಕ್ಕೆ ದಾರಿದೀಪವಾಗಿದೆ. ದೇವರೆಡೆ ತೆರಳಲು ಇದು ಪ್ರೇರಣೆಯಾಗಿದೆ. ಸಾಮಾಜಿಕವಾಗಿ ಸೌಹಾರ್ದ ಯುತವಾಗಿ ಬದುಕಲು ದೇವರ ವಾಕ್ಯ ನೆರವಾಗಲಿ ಎಂದರು.
ಬಲಿಪೂಜೆಯಲ್ಲಿ ಪ್ರವಚನ ನೀಡಿದ ಮಂಗಳೂರು ಧರ್ಮಪ್ರಾಂತದ ಕ್ಯಾರೆಸ್ಮಾತಿಕ್ ಸಂಚಾಲನದ ಸಂಚಾಲಕ ವಂ.ಕ್ಲಿಫರ್ಡ್ ಫೆರ್ನಾಂಡಿಸ್ ಪ್ರಾರ್ಥನೆ ಹಾಗೂ ಧ್ಯಾನಕೂಟ ನಮ್ಮ ವೈಯುಕ್ತಿಕ ಏಳಿಗೆಗೆ ಅಲ್ಲದೆ ಸಹೋದರರ ಒಳಿತನ್ನೂ ಒಳಗೊಂಡಿದೆ. ಅವರಿಗಾಗಿಯೂ ಪ್ರಾರ್ಥಿಸಬೇಕು. ದೇವರ ಮೇಲೆ ಭರವಸೆ ಇಟ್ಟಲ್ಲಿ ಜೀವನದಲ್ಲಿ ನಿರಾಸೆ ಎದುರಾಗದು ಎಂದರು.
ಕೇರಳದ ಅನಾಕ್ಕರ ಮೇರಿಯನ್ ರಿಟ್ರೀಟ್ ಸೆಂಟರ್‌ನ ನಿರ್ದೇಶಕ ವಂ.ಡೊಮಿನಿಕ್ ವಲಮನಲ್ ಉಪನ್ಯಾಸ ನೀಡಿದರು. ಕರ್ನಾಟಕ ಪ್ರಾಂತೀಯ ಕ್ಯಾರಿಸ್ಮಾಟಿಕ್ ಸಂಚಾಲನದ ನಿರ್ದೇಶಕ ವಂ.ಫ್ರ್ಯಾಂಕ್ಲಿನ್ ಡಿಸೋಜ, ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಜೆ.ಬಿ. ಸಲ್ಡಾನ್ಹಾ, ಕುಲಶೇಖರ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂ. ವಿಜಯ್ ಮೊಂತೇರೊ, ವಂ. ಪಾವ್ಲ್ ಸೆಬಾಸ್ಟಿಯನ್, ವಂ. ನಿಶಿತ್ ಲೋಬೊ ಮತ್ತು ವಿವಿಧ ಚರ್ಚ್‌ಗಳ ಧರ್ಮಗುರುಗಳು, ಧರ್ಮಭಗಿನಿಯರು, ಸಾವಿರಾರು ಸಂಖ್ಯೆಯ ಕ್ರೈಸ್ತರು ಹಾಜರಿದ್ದರು.