ಸುರತ್ಕಲ್| ಯುವಕನಿಗೆ ತಂಡದಿಂದ ಮಾರಣಾಂತಿಕ ಹಲ್ಲೆ: ನಾಲ್ಕು ಮಂದಿ ಆರೋಪಿಗಳ ಬಂಧನ

ಸುರತ್ಕಲ್: ರಸ್ತೆ ಮಧ್ಯೆ ನಿಲ್ಲಿಸಿದ್ದ ಟಿಪ್ಪರ್ ಲಾರಿಗಳನ್ನು ತೆರವು ಮಾಡುವಂತೆ ಸೂಚಿಸಿದ್ದಕ್ಕಾಗಿ ತಂಡವೊಂದು ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮುಂಚ್ಚೂರು ಎಂಬಲ್ಲಿ ಗುರುವಾರ ರಾತ್ರಿ ವರದಿಯಾಗಿದೆ.
ಘಟನೆಗೆ ಸಂಬಂಧಿಸಿ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಮಧ್ಯಪದವು ನಿವಾಸಿ ದಿವಾಕರ (39), ಬಂಟ್ವಾಳ ಶಾರದಾ ಬಜನಾಮಂದಿರ ಬಳಿಯ ನಿವಾಸಿ ನವೀನ್ (27), ಸುರತ್ಕಲ್ ಅಗರಮೇಲು ನಿವಾಸಿ ಯಶೋಧರ (28), ಸುರತ್ಕಲ್ ಮುಂಚೂರು ನಿವಾಸಿ ರವಿ (27) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಟಿಪಳ್ಳ 5ನೇ ಬ್ಲಾಕ್ ಡೆಕ್ಕನ್ ವಿಲ್ಲಾ ನಿವಾಸಿ ಅಬೂಬರ್ ಸಿದ್ದೀಕ್ ( 37) ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.
ಘಟನೆಯಿಂದ ಹಲ್ಲೆಗೊಳಗಾದ ಅಬೂಬಕರ್ ಸಿದ್ದೀಕ್ ಅವರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೆಂಪುಕಲ್ಲಿನ ವ್ಯವಹಾರ ಮಾಡುತ್ತಿದ್ದ ಅಬೂಬರ್ ಸಿದ್ದೀಕ್ ಅವರು ಪಕ್ಷಿಕೆರೆ ಹನೀಫ್ ಎಂಬವರಿಗೆ ಕೆಂಪು ಕಲ್ಲುಗಳನ್ನು ಮಾರಾಟ ಮಾಡಿದ್ದು, ಮುಂಚೂರಿಗೆ ತೆರಳಿ ಅವರಿಂದ ಹಣವನ್ನು ಪಡೆದುಕೊಂಡು ಹಿಂದೆ ಬರುತ್ತಿದ್ದ ವೇಳೆ ಸತೀಶ್ ಮುಂಚೂರು ಎಂಬವರ ಮನೆಯ ಬಳಿ ತಲುಪಿದಾಗ ಎರಡು ಟಿಪ್ಪರ್ ಲಾರಿಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಲಾಗಿತ್ತು. ಈ ಬಗ್ಗೆ ಟಿಪ್ಪರ್ ಚಾಲಕರನ್ನು ಪ್ರಶ್ನಿಸಿ ಲಾರಿಯನ್ನು ರಸ್ತೆ ಬದಿಗೆ ಸರಿಸುವಂತೆ ಸೂಚಿಸಿದಾಗ ಸತೀಶ್ ಮುಂಚೂರು ಅವರ ಮನೆಯ ಗೇಟಿನಿಂದ ಹೊರಬಂದ 8 ರಿಂದ 10 ಮಂದಿಯ ಅಪರಿಚಿತರ ತಂಡ ಕೈ ಮತ್ತು ರಸ್ತೆಯಲ್ಲಿದ್ದ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಸಿದ್ದೀಕ್ ಅವರು ಸುರತ್ಕಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.