ಮುಸ್ಲಿಂ ಗುತ್ತಿಗೆದಾರರಿಗೆ ಶೇ. 4 ಮೀಸಲಾತಿ ವಿರೋಧಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ

Update: 2025-03-22 17:31 IST
ಮುಸ್ಲಿಂ ಗುತ್ತಿಗೆದಾರರಿಗೆ ಶೇ. 4 ಮೀಸಲಾತಿ ವಿರೋಧಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ
  • whatsapp icon

ಮಂಗಳೂರು, ಮಾ.22: ರಾಜ್ಯ ಕಾಂಗ್ರೆಸ್ ಸರಕಾರ ಮುಸ್ಲಿಂ ಗುತ್ತಿಗೆದಾರರಿಗೆ ಶೇ. 4 ಮೀಸಲಾತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಶನಿವಾರ ಪ್ರತಿಭಟನೆ ನಡೆಯಿತು.

ಚಿತ್ರದುರ್ಗ ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮೂಲಕ ರಾಜ್ಯದ ಎಸ್.ಸಿ ಹಾಗೂ ಹಿಂದುಳಿದ ವರ್ಗಗಳಿಗೆ ರಾಜ್ಯ ಸರಕಾರ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಮುಸ್ಲಿಂ ಓಲೈಕೆ ನೀತಿಯ ಭಾಗವಾಗಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ನೀಚ ಮತ್ತು ಕೀಳುಮಟ್ಟದ ನಿರ್ಧಾರ ರಾಜ್ಯದ ಜನತೆಗೆ ಎಸಗಿದ ದ್ರೋಹವಾಗಿದೆ. ಧರ್ಮಾಧಾರಿತ ಮೀಸಲಾತಿಯನ್ನು ಸಂವಿಧಾನ ರಚಿಸಿದ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಸಂವಿಧಾನ ಉಳಿಸಿ ಎಂದು ಹೇಳುತ್ತಿರುವ ಕಾಂಗ್ರೆಸಿಗರೇ ಈಗ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಆ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣರಾ ಗಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಹಿಂದುಗಳ ಓಟ್‌ಗೆ ಬೆಲೆಯೇ ಇಲ್ಲ. ಸರಕಾರದ ಈ ತಿರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಎಲ್ಲ ಮತ, ಧರ್ಮದ ಜನರನ್ನು ಸಮಾನವಾಗಿ ಕಾಣುತ್ತಿವೆ. ಕೇಂದ್ರ ಸರಕಾರ ತ್ರಿವಳಿ ತಲಾಖ್ ರದ್ದುಪಡಿ ಸುವ ಮೂಲಕ ಮುಸಲ್ಮಾನ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಬದುಕು ಕಲ್ಪಿಸಲಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗಿದ್ದಾರೆ. 15-20 ವರ್ಷ ಕಳೆದಾಗ ಕಾಂಗ್ರೆಸ್ ಪಕ್ಷವೇ ನಾಶಹೊಂದಲಿದ್ದು, ಕಾಂಗ್ರೆಸ್ ಸ್ಥಾನದಲ್ಲಿ ಮುಸ್ಲಿಂ ಲೀಗ್ ಇರಲಿದೆ ಎಂಬುದನ್ನು ಕಾಂಗ್ರೆಸಿಗರು ಮನಗಾಣಬೇಕು ಎಂದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ರೈತ ಬಜೆಟ್ ಜಾರಿಗೊಳಿಸಿತ್ತು. ಕಾಂಗ್ರೆಸ್ ಸರಕಾರ ಒಂದು ವರ್ಗವನ್ನು ಸಂತೃಪ್ತಿಪಡಿಸಲು ಬಜೆಟ್ ಮಂಡಿಸಿದೆ. ಬಿಲ್ಲವರ ಅಭಿವೃದ್ಧಿಗಾಗಿ ಬಿಜೆಪಿ ಸರಕಾರ ಘೋಷಿಸಿದ ನಾರಾಯಣಗುರು ನಿಗಮಕ್ಕೆ ಬಜೆಟ್‌ ನಲ್ಲಿ ಕೇವಲ ಒಂದು ಲಕ್ಷ ರೂ. ಮೀಸಲಿಡುವ ಮೂಲಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಿಲ್ಲವ ಸಮುದಾಯವನ್ನು ಸಿದ್ದರಾಮಯ್ಯ ಸರಕಾರ ಅವಮಾನಿಸಿದೆ. ನಾರಾಯಣಗುರು ನಿಗಮ ಸ್ಥಾಪನೆಗಾಗಿ ಪಾದಯಾತ್ರೆ ಮಾಡಿದ ಕಾಂಗ್ರೆಸ್ ಮುಖಂಡರು ಈಗ ಬಾಯಿಮುಚ್ಚಿ ಕುಳಿತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮುಖಂಡರಾದ ರವಿಶಂಕರ ಮಿಜಾರ್, ನಿತಿನ್‌ಕುಮಾರ್, ಆರ್.ಸಿ. ನಾರಾಯಣ್, ಸುಲೋಚನಾ ಭಟ್, ಶಿಲ್ಪಾ ಸುವರ್ಣ, ಮಾಜಿ ಮೇಯರ್‌ಗಳಾದ ಸುಧೀರ್ ಶೆಟ್ಟಿ, ಜಯಾನಂದ ಅಂಚನ್, ಮನೋಜ್‌ ಕುಮಾರ್ ಭಾಗವಹಿಸಿದ್ದರು.

ಪ್ರತಿಭಟನೆ ಬಳಿಕ ಬಿಜೆಪಿ ಕಾರ್ಯಕರ್ತರು ಕೆಲಕಾಲ ರಸ್ತೆ ತಡೆ ನಡೆಸಿದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News