ವೈದ್ಯರು ಸಂಸ್ಥೆಯ ರಾಯಭಾರಿಗಳಾಗಲಿ: ಡಾ. ಸುಭಾಸ್ ಸಿಂಗ್

ಮಂಗಳೂರು, ಎ.3: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ಪೈಕಿ ಒಂದಾಗಿರುವ ಫಾದರ್ ಮುಲ್ಲರ್ ಹೋಮಿಯೊಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೋಮಿಯೋಪಥಿ ವೈದ್ಯರುಗಳಾಗಿ ವೃತ್ತಿ ರಂಗ ಪ್ರವೇಶಿಸಿದವರು ಸಂಸ್ಥೆಯ ರಾಯಭಾರಿಗಳಾಗಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವ ಹಿಸಬೇಕೆಂದು ಕೋಲ್ಕತ್ತಾದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪಥಿ ಇದರ ಮಾಜಿ ನಿರ್ದೇಶಕ ಡಾ. ಸುಭಾಸ್ ಸಿಂಗ್ ಕರೆ ನೀಡಿದ್ದಾರೆ.
ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗುರುವಾರ ನಡೆದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ 35ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ವೈದ್ಯಕೀಯ ವೃತ್ತಿ ಬದುಕಿಗೆ ಕಾಲಿರಿಸುವಾಗ ನಾನಾ ಸವಾಲುಗಳು ಎದುರಾಗಬಹುದು. ಇವುಗಳ ನಡುವೆಯೂ ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಫಾದರ್ ಮುಲ್ಲರ್ ಸಂಸ್ಥೆಯ ಸ್ಥಾಪಕರಾದ ಫಾದರ್ ಮುಲ್ಲರ್ ಮತ್ತು ಹೋಮಿಯೋಪಥಿ ಜನಕ ಕ್ರಿಶ್ಚಿಯನ್ ಫ್ರೆಡ್ರಿಕ್ ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಎರಡು ದೊಡ್ಡ ಜವಾಬ್ದಾರಿಯನ್ನು ಹೊಂದಿ ದ್ದಾರೆ ಎಂದರು.
ಮುಖ್ಯ ಅತಿಥಿ ಸಂತ ಅಲೋಶಿಯಸ್ ಪರಿಗಣಿತ ವಿವಿಯ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಅವರು ಫಾದರ್ ಮುಲ್ಲರ್‌ನಿಂದ ಪದವಿ ಪಡೆದು ವೃತ್ತಿಬದುಕಿಗೆ ಕಾಲಿರಿಸುವ ವೈದ್ಯರು ಸಹಾನುಭೂತಿಯಿಂದ ಸೇವೆ ಸಲ್ಲಿಸುವಂತೆ ಕಿವಿಮಾತು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಹೋಮಿಯೋಪಥಿ ತತ್ವಗಳೊಂದಿಗೆ ಸಮಗ್ರವಾಗಿ ಹೋಮಿಯೋಪಥಿ ಕಲಿಕೆ ಮತ್ತು ಚಿಕಿತ್ಸೆಯ ಪ್ರಗತಿ ಹಾಗೂ ತಾಂತ್ರಿಕ ಪ್ರಗತಿಯನ್ನು ಗುರುತಿಸಿಕೊಂಡು ಕಲಿಯುವುದನ್ನು ಮುಂದುವರಿಸುವಂತೆ ಕರೆ ನೀಡಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿ ಕಾರಿ ವಂ. ಅಶ್ವಿನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್‌ನ ಆಡಳಿತಾಧಿಕಾರಿ ವಂ. ನೆಲ್ಸನ್ ಧೀರಾಜ್ ಪಾಯ್ಸ್ , ಉಪ ಪ್ರಾಂಶುಪಾಲ ಡಾ. ವಿಲ್ಮಾ ಮೀರಾ ಡಿ ಸೋಜ , ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ ಯು.ಕೆ , 2025ರ ಪದವಿ ಪ್ರದಾನ ಸಮಾರಂಭದ ಸಂಚಾಲಕಿಯಾದ ಡಾ. ರೆಶೆಲ್ ನೊರೊನ್ಹಾ ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರು 2024-25ನೇ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ 89 ಹೋಮಿಯೋಪಥಿ ಪದವೀಧರರಿಗೆ ಮತ್ತು 26 ಸ್ನಾತಕೋತ್ತರ ಪದವೀಧರರಿಗೆ ಸ್ನಾತಕೋತ್ತರ ಪದವಿಯನ್ನು ಪ್ರದಾನ ಮಾಡಲಾಯಿತು.
ಪದವೀಧರರ ಪರವಾಗಿ, ಡಾ. ಆಶಾ ಡಿ ಸೋಜ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ನಡೆಸಿದ ಹೋಮಿಯೋಪಥಿ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ 6 ಮಂದಿ , ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ 11 ಮಂದಿಯನ್ನು ಸಂಸ್ಥೆಯ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಸನ್ಮಾನಿಸಿದರು.
2021-22ರ ಸಾಲಿನ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗೆ ಮುಲ್ಲೇರಿಯನ್ಸ್ ಪ್ರಾಯೋಜಿಸಿದ ಡಾ. ಸುಮೋದ್ ಜಾಕೋಬ್ ಸೊಲೊಮನ್ ಪ್ರಶಸ್ತಿಯನ್ನು ಡಾ. ಶ್ರೇಯಾಂಕ್ ಎಸ್ ಕೋಟ್ಯಾನ್‌ಗೆ ನೀಡಲಾಯಿತು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯು ನೀಡುವ ಅಧ್ಯಕ್ಷರ ಚಿನ್ನದ ಪದಕವನ್ನು ಮುತ್ತು ವಲ್ಲಿಯಮ್ಮೈ ನಾಚಿಯಪ್ಪನ್ ಅವರಿಗೆ ನೀಡಿ ಗೌರಲಾಯಿತು. ಪದವಿ ವಿದ್ಯಾರ್ಥಿಗಳ ಶ್ರೇಷ್ಠತಾ ಪ್ರಶಸ್ತಿಯನ್ನು ಡಾ. ಎ ಕೆ ದೇವಿಕಾ ಮತ್ತು ಸ್ನಾತಕೋತ್ತರ ಪದವೀಧರ ಶ್ರೇಷ್ಠತಾ ಪ್ರಶಸ್ತಿಯನ್ನು ಡಾ. ವಿ. ಆರ್. ಕೃಷ್ಣ ಕಿರಣ್ ಭಟ್ ಪಡೆದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಯೋಜಿತ ನಿರ್ದೇಶಕರು ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ. ಫೌಸ್ಟಿನ್ ಲೂಕಸ್ ಲೋಬೊ ವಂದಿಸಿದರು. ಡಾ. ಸ್ಕಂದನ್ ಎಸ್ ಕುಮಾರ್ ಮತ್ತು ಡಾ. ಆ್ಯಡ್ಲಿನ್ ಆರ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.