ಮುಲ್ಕಿಯ ಆಟೋ ರಿಕ್ಷಾ ಚಾಲಕನ ಕೊಲೆ ಪ್ರಕರಣದ ಸಮಗ್ರ ತನಿಖೆಗೆ ಡಿವೈಎಫ್ಐ ಆಗ್ರಹ

Update: 2025-04-12 11:07 IST
ಮುಲ್ಕಿಯ ಆಟೋ ರಿಕ್ಷಾ ಚಾಲಕನ ಕೊಲೆ ಪ್ರಕರಣದ ಸಮಗ್ರ ತನಿಖೆಗೆ ಡಿವೈಎಫ್ಐ ಆಗ್ರಹ

ಮುಹಮ್ಮದ್ ಶರೀಫ್

  • whatsapp icon

ಮಂಗಳೂರು: ಮುಲ್ಕಿ ಕೊಳ್ನಾಡು ನಿವಾಸಿ, ಆಟೊ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ರನ್ನು ಬಾಡಿಗೆ ನೆಪದಲ್ಲಿ ಕರೆದೊಯ್ದು ಮಂಜೇಶ್ವರದ ಕುಂಜತ್ತೂರಿನಲ್ಲಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಬಾವಿಗೆ ಎಸೆದಿರುತ್ತಾರೆ. ಈ ಪ್ರಕರಣದ ಸುದ್ದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಓಡಿಸಿ ದುಡಿಯುವಂತಹ ಚಾಲಕರನ್ನು ಬೆಚ್ಚಿ ಬೀಳಿಸಿದೆ. ಕೊಲೆ ಆರೋಪಿಗಳನ್ನು ಪೊಲೀಸ್ ಇಲಾಖೆ ಶೀಘ್ರ ಬಂಧಿಸಿ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು ಎಂದು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.

ನಿರ್ಜನ ಪ್ರದೇಶದಲ್ಲಿ ಆಟೋ ಚಾಲಕರನ್ನು ಕೊಲೆ ನಡೆಸಿರುವ ಇಂತಹ ಪ್ರಕರಣಗಳು ದಕ ಜಿಲ್ಲೆಯಲ್ಲಿ ಮೊದಲದೇನಲ್ಲ. ಈ ಹಿಂದೆಯೂ ಬಹುತೇಕ ಆಟೋ ರಿಕ್ಷಾ ಚಾಲಕರನ್ನು ಗುರಿಯಾಗಿಸಿ ಬಾಡಿಗೆ ನೆಪದಲ್ಲಿ ಕರದೊಯ್ದು ಕೊಲೆ ನಡೆಸಿರುವ ಘಟನೆಗಳು ನಿರಂತರವಾಗಿ ನಡೆದಿದೆ. ನಾಟೇಕಲ್ ನಲ್ಲಿ ಇದಾಯತ್, ತೊಕ್ಕೊಟ್ಟಿನಲ್ಲಿ ಲ್ಯಾನ್ಸಿ, ನೆತ್ತರಕೆರೆಯ ರಿಫಾಯಿ ಹೀಗೆ ಅಮಾಯಕ ರಿಕ್ಷಾ ಚಾಲಕರ ಸಾಲು ಸಾಲು ಕೊಲೆಗಳು ಈ ಜಿಲ್ಲೆಯಲ್ಲಿ ಸಂಭವಿಸಿವೆ. ಬಹುತೇಕ ಘಟನೆಗಳು ಜಿಲ್ಲೆಯ ಮತೀಯ ಧ್ರುವೀಕರಣದ ರಾಜಕಾರಣಕ್ಕೆ ಅತೀ ಸುಲಭವಾಗಿ ಸಿಗುವ ಬಡ ಆಟೋ ರಿಕ್ಷಾ ಚಾಲಕರನ್ನೇ ಗುರಿಯಾಗಿಸಿ ನಡೆಸಿರುವ ಕೊಲೆಗಳೇ ಅತೀ ಹೆಚ್ಚು. ದಿನದ ದುಡಿಮೆಗಾಗಿ ಕಷ್ಟಪಟ್ಟು ದುಡಿಯುವ ಆಟೋ ರಿಕ್ಷಾ ಚಾಲಕರ ಪ್ರಾಣಕ್ಕೆ ಬೆಲೆನೇ ಇಲ್ಲದಂತಾಗಿದೆ. ಆಳುವ ಸರಕಾರಗಳೂ ಈ ಅಸಂಘಟಿತ ವರ್ಗಕ್ಕೆ ಯಾವೊಂದು ಸೌಕರ್ಯಗಳನ್ನು ಕಲ್ಪಿಸದೇ ಇರೋದು ದುರದೃಷ್ಟಕರ. ಕನಿಷ್ಟಪಕ್ಷ ಕೊಲೆಯಾದ ಕುಟುಂಬಗಳಿಗೆ ಆರ್ಥಿಕ ಪರಿಹಾರನೂ ಕೊಡದೆ ಇರುವ ಕ್ರಮ ದಿನನಿತ್ಯ ದುಡಿಯುವ ಆಟೋ ರಿಕ್ಷಾ ಚಾಲಕರನ್ನು ಕಂಗೆಡಿಸಿದೆ ಎಂದು ಡಿವೈಎಫ್ ಐ ಹೇಳಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ಆಟೋ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ಕೊಲೆ ಪ್ರಕರಣವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೊಳಪಡಿಸಬೇಕು. ಕೊಲೆಗಟುಕರನ್ನು ಅತೀ ಶೀಘ್ರ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಾಗೂ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಬೇಕೆಂದು ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News