ಕ್ರಿಸ್‌ಮಸ್, ಹೊಸವರ್ಷಕ್ಕೆ ಹೊಸ ಮಾರ್ಗಸೂಚಿ ಇಲ್ಲ: ಸಚಿವ ದಿನೇಶ್ ಗುಂಡೂರಾವ್

Update: 2023-12-22 13:28 GMT

ಮಂಗಳೂರು, ಡಿ. 22: ಕೋವಿಡ್ ಹಿನ್ನೆಲೆಯಲ್ಲಿ ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸೇರಿದಂತೆ ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಪ್ರತ್ಯೇಕ ನಿರ್ಬಂಧ ಅಥವಾ ಹೊಸ ಮಾರ್ಗಸೂಚಿ ಇಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲಿದ್ದು, ಎಲ್ಲಾ ರೀತಿಯ ಅಗತ್ಯ ಎಚ್ಚರಿಕಾ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಅರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ತಾಂತ್ರಿಕ ಸಮಿತಿ ಸೂಚಿಸಿದರೆ ಮಾತ್ರ ವ್ಯಾಕ್ಸಿನೇಶನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಯಾವುದೇ ಸಂದರ್ಭ ಎದುರಿಸಲು ಸಿದ್ಧ ಇರುವುದಾಗಿ ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ. ಈ ಕೋವಿಡ್ ಅಪಾಯಕಾರಿ ಆಗಿರಲ್ಲ. ಯಾರಿಗೂ ಹೆಚ್ಚು ಅಪಾಯ ಇಲ್ಲ ಎಂಬುದನ್ನು ಈಗಾಗಲೇ ತಜ್ಞರೂ ಹೇಳಿರುವುದರಿಂದ ಅಗತ್ಯ ಮುಂಜಾಗೃತಾ ಹಾಗೂ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ಸದ್ಯ ಐದು ಸಾವಿರ ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಗಡಿ ಜಿಲ್ಲೆಯಾದ ಮಂಗಳೂರು, ಮೈಸೂರಿಗೆ ತಲಾ 300 ಟೆಸ್ಟ್ ಉಳಿದಂತೆ ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ತಲಾ 100 ಅಥವಾ 150 ಟೆಸ್ಟ್‌ಗಳ ಗುರಿ ನೀಡಲಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿದರೆ ಉತ್ತಮ. ಆದರೆ ಯಾವುದೂ ಕಡ್ಡಾಯ ಮಾಡಲಾಗಿಲ್ಲ. ಈ ಉಪತಳಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಇದು ತೀವ್ರತೆರನಾದದ್ದು ಅಲ್ಲ ಎಂದು ಹೇಳಲಾಗಿದೆ. ಹಾಗಾಗಿ ಯಾವುದನ್ನೂ ಎಲ್ಲೂ ಕಡ್ಡಾಯ ಅಂತ ಮಾಡುತ್ತಿಲ್ಲ. ಆದರೆ ಮುಂದೆ ಯಾವುದೇ ರೀತಿಯ ತೊಂದರೆ ಆಗದಂತೆ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ. ಇದರಿಂದ ನಮ್ಮ ಆರೋಗ್ಯ ವ್ಯವಸ್ಥೆಗೂ ಅನುಕೂಲ ಎಂದವರು ಹೇಳಿದರು.

ಕ್ಯಾಬಿನೆಟ್ ಉಪಸಮಿತಿ ಮುಂದಿನ ಸೋಮವಾರ ಅಥವಾ ಮಂಗಳವಾರ ಸಭೆ ನಡೆಸಲಿದೆ. ಕೇಂದ್ರ ಮತ್ತು ಬೇರೆ ರಾಜ್ಯಗಳ ಮಾಹಿತಿ ಪಡೆದು ಮುಂದಿನ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ವೆಂಟಿಲೇಟರ್ ಕಾರ್ಯ ನಿರ್ವಹಣೆ, ಸರಕಾರಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಪೂರೈಕೆ ಆಗುತ್ತಿದೆ. ಕೆಲವು ಕಡೆ ಸ್ವಲ್ಪ ತಡವಾಗಿದ್ದರೂ ಶೀಘ್ರವೇ ಎಲ್ಲಾ ಕಡೆ ಪೂರೈಕೆಯಾಗಲಿದೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಹಾಗೂ ಮಾರ್ಗಸೂಚಿಗಳ ಬಗ್ಗೆಯೂ ಸಂಪುಟ ಉಪಸಮಿತಿ ಸಭೆ ನಿರ್ಧರಿಸಲಿದೆ ಎಂದವರು ವಿವರಿಸಿದರು.

ರಾಜ್ಯದಲ್ಲಿ ಸದ್ಯ ಕೋವಿಡ್‌ನ ಉಪತಳಿ ಜೆಎನ್.1 ಪ್ರಕರಣ ದೃಢಪಟ್ಟಿಲ್ಲ. ಕೋವಿಡ್ ಬಾಧಿತರ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ ನಾಲ್ಕೈದು ದಿನಗಳಲ್ಲಿ ವರದಿ ಬರಲಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 12,908 ಬೆಡ್ ಸೌಲಭ್ಯವಿದ್ದು, 1698 ಐಸೋಲೇಶನ್ ಬೆಡ್‌ಗಳು, 722 ಐಸಿಯು ಬೆಡ್‌ಗಳು, 336 ವೆಂಟಿಲೇಟರ್ ಹೊಂದಿದ ಬೆಡ್‌ಗಳಿವೆ. ಒಟ್ಟು 11 ಕೋವಿಡ್ ತಪಾಸಣಾ ಲ್ಯಾಬ್‌ಗಳಿದ್ದು, 2633 ಆರ್‌ಟಿಪಿಇಸಿಆರ್ ಕಿಟ್‌ಗಳು, 409 ರ್ಯಾಟ್ ಕಿಟ್‌ಗಳು, 15407 ಪಿಪಿಇ ಕಿಟ್‌ಗಳು ಸೇರಿದಂತೆ ಲಭ್ಯವಿರುವ ಆರೋಗ್ಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಅಧಿಕಾರಿಗಳಿಗೆ ಸೂಚನೆ

ಎಲ್ಲಾ ತಾಲೂಕು, ಹಾಗೂ ಆರೋಗ್ಯ ಕೇಂದ್ರಗಳು ಎಚ್ಚರಿಕೆ ಹಾಗೂ ಮುಂಜಾಗೃತಾ ಕ್ರಮಗಳನ್ನು ವಹಿಸಿಕೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದ.ಕ. ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್ ಕಿಟ್‌ಗಳ ಲಯತೆ, ಆಕ್ಸಿಜನ್ ಬೆಡ್, ಐಸಿಯು ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಸಭೆಯಲ್ಲಿ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್, ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ ಸಚಿವರು, ಸಾವು ಸಂಭವಿಸಿದ ಸಂದರ್ಭ ಕೋವಿಡ್ ದೃಢೀಕರಣವನ್ನು ನಿಖರವಾಗಿ ಮಾಡಬೇಕು. ಜಿಲ್ಲಾ ಸಮಿತಿ ಮೂಲಕ ಪರಿಶೀಲನೆ ನಡೆಸಿ ಕೋವಿಡ್ ಸಾವಿನ ಬಗ್ಗೆ ಘೋಷಣೆ ಮಾಡಬೇಕು. ಖಾಸಗಿ ಆಸ್ಪತ್ರೆಗಳ ಆಡಳಿತ ವರ್ಗಕ್ಕೂ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.

ವೈದ್ಯಕೀಯ ಕಾಲೇಜುಗಳು, ಪ್ಯಾರಾ ಮೆಡಿಕಲ್ ಕಾಲೇಜುಗಳು ಮತ್ತು ಇತರ ಕಾಲೇಜುಗಳಲ್ಲಿ ಕೇರಳ ಮತ್ತು ಇತರ ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಾಗ ತಪಾಸಣೆಗೆ ಒಳಪಡಿಸುವಂತೆ ಸಚಿವರು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಿಷ್ಯಂತ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪಾಲಿಕೆ ಆಯುಕ್ತ ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ, ಡಾ. ತಿಮ್ಮಯ್ಯ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇರಳ ಗಡಿ ಭಾಗದಲ್ಲಿ ಐದು ಕಡೆ ಚೆಕ್‌ಪೋಸ್ಟ್

ಗುರುವಾರದವರೆಗೆ ಜಿಲ್ಲೆಯಲ್ಲಿ ಒಟ್ಟು 3 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಅಧಿಕಾರಿ ಗಳು ಸಚಿವರಿಗೆ ಮಾಹಿತಿ ನೀಡಿದರು. ಕೇರಳದ ಗಡಿ ಭಾಗದಲ್ಲಿ ಐದು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಧ್ವನಿವರ್ಧಕ ಮೂಲಕ ಜಾಗೃತಿ ಹಾಗೂ ಟೆಸ್ಟಿಂಗ್ ಬಗ್ಗೆ ಮಾಹಿತಿ ಹಾಗೂ ಆಶಾಕಾರ್ಯಕರ್ತೆಯರೂ ಎಚ್ಚರಿಕೆ ವಹಿಸಿರುವ ಬಗ್ಗೆ ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.

ಕೋವಿಡ್ ಬಾಧಿತ ವ್ಯಕ್ತಿ ಸಾವು

ಉಸಿರಾಟದ ತೊಂದರೆಯಿಂದಾಗಿ ವೆನ್‌ಲಾಕ್‌ನ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಭಾರತದ ಮೂಲಕ 40 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಆತ ತಪಾಸಣೆಯ ವೇಳೆ ಕೋವಿಡ್ ಪಾಸಿಟಿವ್ ವರದಿಯಾಗಿತ್ತು.

ವಲಸೆ ಕಾರ್ಮಿಕನಾಗಿದ್ದ ಆತ ಎರಡು ದಿನಗಳ ಹಿಂದೆ ತಪಾಸಣೆಯ ವೇಳೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಆತನ ಸಾವು ಕೋವಿಡ್‌ನಿಂದಲೇ ಆಗಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News