ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ: ಗೃಹ ಸಚಿವ ಡಾ. ಪರಮೇಶ್ವರ್

Update: 2023-12-24 12:31 GMT

ಮಂಗಳೂರು, ಡಿ. 24: ದ.ಕ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿ ಬಹಳಷ್ಟು ಕಡಿಮೆಯಾಗಿದೆ ಎಂಬ ಮಾಹಿತಿ ನನಗೆ ಬಂದಿದೆ. ಸಂಖ್ಯೆ ಕಡಿಮೆ ಆಗಿರುವುದು ನಿಜ. ಹಾಗಿದ್ದರೂ ಇಂತಹ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸ್ ಆಯುಕ್ತರು, ಎಸ್ಪಿ ಹಾಗೂ ಐಜಿಪಿಯವರಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದಾರೆ.

ರವಿವಾರ ಮಂಗಳೂರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ಸಮಾಜದಲ್ಲಿ ಸಾಮರಸ್ಯ ಇರಬೇಕು. ಹಾಗಾಗಿ ಅನೈತಿಕ ಪೊಲೀಸ್‌ಗಿರಿಯಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದ ಅವರು, ಆ್ಯಂಟಿ ಕಮ್ಯೂನಲ್ ವಿಂಗ್‌ಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೆಚ್ಚಿನ ಸಿಬ್ಬಂದಿ ನೀಡಬೇಕಾಗಿದೆ ಎಂದರು.

ಹಿಜಾಬ್ ನಿಷೇಧ ನಿರ್ಧಾರ ವಾಪಾಸು ಪಡೆಯುವ ಬಗ್ಗೆ ಸಿ.ಎಂ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗಾಗಲೇ ಹಿಜಾಬ್ ನಿಷೇಧ ಬಗ್ಗೆ ನಾವು ಆದೇಶವೇ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಮಾಡಿದ್ದರೂ ಸಹ ನಾವು ಅದನ್ನು ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಾಧಕ ಬಾಧಕ ನೋಡಿಕೊಂಡು ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಈ ಬಗ್ಗೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವರು ನುಡಿದರು.

ಆ ಸಮುದಾಯವದವರು ಹಿಂದಿನಿಂದಲೂ ಸಹ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಇತ್ತಿಚೇಗಷ್ಟೇ ಬಿಜೆಪಿ ಸರಕಾರರ ಬಂದಾಗ ಅದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಆಗಿದೆ. ಸಂವಿಧಾನವನ್ನು ಬಿಟ್ಟು ನಾವು ಯಾವುದೇ ಕೆಲಸ ಮಾಡುವುದಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಏನೇ ತೀರ್ಮಾನ ಮಾಡಿದಾಗಲೂ ಕೆಲವರಿಗೆ ನೋವಾಗಬಹುದು, ಕೆಲವರಿಗೆ ಸಂತೋಷವಾಗಬಹುದು. ಆದರೆ ಸಂವಿಧಾನದ ಚೌಕಟ್ಟಿನಲ್ಲಿ ನಮ್ಮ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News