ಆ.7ರಂದು ಪ್ರೈಡ್ ಆಫ್ ಕೆನರಾ: ಟೂ ಸನ್ ಆಫ್ ಇಂಡಿಯಾ, ಫಾ. ಜೆರೊಮ್ ಡಿ ಸೋಜ’ ಕೃತಿ

Update: 2023-08-05 13:06 GMT

ಮಂಗಳೂರು, ಆ.5: ಪ್ರೊ.ಎಡ್ಮಂಡ್ ಫ್ರಾಂಕ್ ರಚಿಸಿದ ‘‘ ಪ್ರೈಡ್ ಆಫ್ ಕೆನರಾ: ಟೂ ಸನ್ ಆಫ್ ಇಂಡಿಯಾ, ಫಾ. ಜೆರೊಮ್ ಡಿ ಸೋಜ’ ಕೃತಿ ಆ.7 ರಂದು ಮಧ್ಯಾಹ್ನ 3:00 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ವಂ.ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ ತಿಳಿಸಿದರು.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೈಂಟ್ ಅಲೋಶಿಯಸ್ ಪ್ರಕಾಶನ ಪ್ರಕಟಿಸಿದ ಇಂಗ್ಲಿಷ್‌ನಲ್ಲಿರುವ ಕೃತಿಯನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ವಂ.ಡಾ. ಪೀಟರ್ ಪಾಲ್ ಸಲ್ದಾನ್ಹಾ ಬಿಡುಗಡೆ ಗೊಳಿಸಲಿರುವರು ಎಂದು ಮಾಹಿತಿ ನೀಡಿದರು.

ಕೃತಿಯು ಕೊಂಕಣಿ ಮತ್ತು ಕನ್ನಡದಲ್ಲಿ ಮುಂದೆ ಪ್ರಕಟಗೊಳ್ಳಲಿದೆ ಎಂದು ವಂ.ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ ತಿಳಿಸಿದರು.

ಸಂತ ಅಲೋಶಿಯೆಸ್ ಸಂಸ್ಥೆಗಳ ರೆಕ್ಟರ್ ವಂ.ಮೆಲ್ವಿನ್ ಜೆ. ಪಿಂಟೊ ಎಸ್‌ಜೆ, ಅಪೋಸ್ಟ್ಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತ್ಯದ ಮುಖ್ಯಸ್ಥೆ ವಂ.ಸಿಸ್ಟರ್ ಮರಿಯಾ ಶಮಿತಾ ಎಸಿ, ರೆ.ಫಾ. ಸಿಲ್ವೆಸ್ಟರ್ ಡಿ’ಕೋಸ್ತಾ ಮೂಲ್ಕಿ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ನ ಧರ್ಮಗುರು ವಂ. ಸಿಲ್ವೆಸ್ಟರ್ ಡಿ ಕೋಸ್ತಾ, ಜೆರೋಮ್ ಸಂಬಂಧಿ ಎಡ್ವಿನ್ ಡಿ ಸೋಜ ಮುಲ್ಕಿ ಕೃತಿ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿರುವರು.

ಫಾ. ಜೆರೋಮ್ ಡಿ ಸೋಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದ್ದರು. ಮೂಲ್ಕಿಯ ಸರಕಾರಿ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಅವರು ಬಳಿಕ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ವನ್ನು ಪಡೆದರು. ತಮ್ಮ ಉನ್ನತ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ತಿರುಚ್ಚಿಯ ಸೈಂಟ್ ಜೋಸೆಫ್ ಕಾಲೇಜು ಮತ್ತು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ಮುಂದುವರಿಸಿದ್ದರು.

ಫಾ. ಜೆರೋಮ್ ಅವರು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿದ್ದರು. ಭಾರತೀಯ ಸಂವಿಧಾನದ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದರು ಮತ್ತು ಭಾರತದ ಸಂವಿಧಾನದ ಮೂಲ ಪ್ರತಿಗೆ ಸಹಿ ಹಾಕಿದವರು. ಐವತ್ತರ ದಶಕಗಳಲ್ಲಿ ಅಲ್ಪ ಸಂಖ್ಯಾ ತರ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳ ಕುರಿತ ಚರ್ಚೆಗಳಲ್ಲಿ . ಜೆರೋಮ್ ಡಿ ಸೋಜ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮಾರ್ಟಿಸ್ ವಿವರಿಸಿದರು.

ಫಾ. ಜೆರೋಮ್ ಅವರು 1952ರವರೆಗೆ ಮೊದಲ ಮಧ್ಯಂತರ ಸಂಸತ್ತಿನ ಸದಸ್ಯರೂ ಆಗಿದ್ದರು. 1949 ರಿಂದ 1957 ರವರೆಗೆ ನಾಲ್ಕು ಬಾರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಭಾರತೀಯ ನಿಯೋಗದ ಸದಸ್ಯರಾಗಿ ಅವರು ನೇಮಕ ಗೊಂಡಿದ್ದರು. ಅವರ ಜನ್ಮ ಶತಮಾನೋತ್ಸವ ವರ್ಷವಾಗಿರುವ 1997ರಲ್ಲಿ ಭಾರತ ಸರಕಾರವು 2 ರೂ. ಮುಖಬೆಲೆಯ ಸ್ಮರಣಾರ್ಥ ಅಂಚೆ ಚೀಟಿಯನ್ನು ಹೊರತರುವ ಮೂಲಕ ಅವರನ್ನು ಗೌರವಿಸಿತ್ತು.

ಸುದ್ದಿಗೋಷ್ಠಿಯಲ್ಲಿ ಕೃತಿಯ ಲೇಖಕರಾದ ಪ್ರೊ. ಎಡ್ಮಂಡ್ ಫ್ರಾಂಕ್, ಎಚ್.ಎಂ.ಪೆರ್ನಾಲ್, ಡಾ.ರೊನಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News