ಪಾಣೆಮಂಗಳೂರು: ಘನ ವಾಹನ ಸಂಚಾರ ನಿಷೇಧಕ್ಕೆ ಕಬ್ಬಿಣದ ಕಮಾನು ಅಳವಡಿಕೆ

Update: 2023-10-20 16:10 GMT

ಬಂಟ್ವಾಳ : ಶತಮಾನದ ಹಳೆಯದಾದ ಪಾಣೆಮಂಗಳೂರು ಉಕ್ಕಿನ (ನೇತ್ರಾವತಿ) ಸೇತುವೆಯಲ್ಲಿ ಘನಗಾತ್ರದ ವಾಹನ ಗಳು ಸಂಚಾರ ಮಾಡದಂತೆ ತಡೆಯಲು ಕಬ್ಬಿಣದ ಕಮಾನು ಅಳವಡಿಸಲಾಗಿದೆ.

ಬಂಟ್ವಾಳ ಪುರಸಭಾ ಇಲಾಖೆಯ ವತಿಯಿಂದ ಸೇತುವೆಯ ಎರಡು ಭಾಗದಲ್ಲಿ ಸೀಮಿತ ಎತ್ತರದಲ್ಲಿ ಅಡ್ಡವಾಗಿ ಕಬ್ಬಿಣದ ರಾಡ್ ಅಳವಡಿಸಲಾಗಿದ್ದು ಘನಗಾತ್ರದ ಲಾರಿ, ಬಸ್ ಗಳು ಓಡಾಟ ನಡೆಸದಂತೆ ತಡೆ ಹಿಡಿಯಲಾಗಿದೆ.

ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಉಕ್ಕಿನ (ನೇತ್ರಾವತಿ) ಸೇತುವೆಯ ಮಧ್ಯಭಾಗದಲ್ಲಿ ಸಣ್ಣದಾದ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾರದ ಹಿಂದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪಾಣೆಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬರುವಾಗ ಅಕ್ಕರಂಗಡಿ ಬಳಿ ಸುಮಾರು ನಾಲ್ಕು ಪಿಲ್ಲರ್ ಗಳ ಬಳಿಕ ಬಿರುಕು ಕಾಣಿಸಿಕೊಂಡಿತ್ತು. ಡಾಮರು ಎದ್ದು ಹೋಗಿದ್ದು ಸಣ್ಣ ಗುಂಡಿ ಯಾಗಿರುವುದು ಕಂಡು ಬಂದಿದ್ದು ಈ ಬಗ್ಗೆ ಸ್ಥಳೀಯರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಹಳೆಯ ಉಕ್ಕಿನ ಸೇತುವೆಯ ಆಯುಷ್ಯ ಮುಗಿದಿರುವ ಹಿನ್ನೆಲೆಯಲ್ಲಿ ನೂತನ ಸೇತುವೆ ನಿರ್ಮಾಣಗೊಂಡಿದ್ದು, ಬಳಿಕ ಇಲಾಖೆ ಆಯುಷ್ಯ ಮುಗಿದ ಈ ನೇತ್ರಾವತಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂಬ ನಾಮ ಫಲಕವನ್ನು ಅಳವಡಿಸಿ ಅಪಾಯದ ಬಗ್ಗೆ ಎಚ್ಚರಿಕೆ ನೀಡಿತ್ತು.

ಅಪಾಯದ ಬಗ್ಗೆ ಮುನ್ಸೂಚನೆ ನೀಡಲಾಗಿತ್ತಾದರೂ ಪಾಣೆಮಂಗಳೂರು ಪೇಟೆಯನ್ನು ಉಳಿಸಬೇಕು ಎಂಬ ಕೆಲವರ ವಾದ ಮತ್ತು ಬೇಡಿಕೆಯನ್ನು ಮುಂದಿಟ್ಟುಕೊಂಡು ಎಂದಿನಂತೆ ಬಸ್ ಸಹಿತ ಇತರ ಘನ ವಾಹನಗಳು ಯಥೇಚ್ಛವಾಗಿ ಸಂಚಾರ ಆರಂಭಿಸಿದ್ದವು.‌‌

ಸೇತುವೆ ಬಿರುಕು ಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದ್ದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದರು. ಬಂಟ್ವಾಳ ತಹಶಿಲ್ದಾರ್ ಎಸ್.ಬಿ.ಕೂಡಲಗಿ, ಪುರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರಾದರೂ ಈ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಾದ ಬಳಿಕವೂ ಯಾವುದೇ ಎಗ್ಗಿಲ್ಲದೆ ಇದೇ ಸೇತುವೆಯಲ್ಲಿ ಘನ ವಾಹನಗಳು ಎಂದಿನಂತೆ ಸಂಚಾರ ಮಾಡುತ್ತಿದ್ದವು. ಅಪಾಯಕಾರಿ ಸೇತುವೆಯ ಬಗ್ಗೆ ಇಲಾಖೆ ಮತ್ತು ಯಾವುದೇ ಸೂಚನಾ ಫಲಕಗಳನ್ನು ಕೂಡಾ ಅಳವಡಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಸೇತುವೆ ಮಧ್ಯ ಭಾಗದಲ್ಲಿ ಸಣ್ಣ ಬಿರುಕು ಕಂಡಿದೆ ಹಾಗಾಗಿ ಸೇತುವೆಯಲ್ಲಿ ಘನಗಾತ್ರದ ವಾಹನಗಳು ಸಂಚಾರ ಮಾಡಿದರೆ ಮುರಿದು ಬೀಳುವ ಅವಕಾಶಗಳು ಇವೆ. ಎಂಬ ಎಚ್ಚರಿಕೆಯ ವಿಚಾರವನ್ನು ಸ್ಥಳೀಯ ಪೋಲೀಸ್ ಇಲಾಖೆ ಕಂದಾಯ ಇಲಾಖೆ ಮತ್ತು ಪುರಸಭಾ ಇಲಾಖೆ ಗೆ ಮಾಹಿತಿ ನೀಡಿದ್ದರು.

ಬಿರುಕಿನ ಬಗ್ಗೆ ಸ್ಥಳೀಯರ ದೂರಿನಂತೆ ಮಾಧ್ಯಮ ಗಳು ವರದಿ ಮಾಡಿದ್ದವು. ಘಟನೆ ನಡೆದ ಒಂದು ವಾರಗಳ ಬಳಿಕ ಇದೀಗ ಕಮಾನು ಹಾಕುವ ಕಾಮಗಾರಿ ಪೂರ್ಣಗೊಂಡಿದೆ. ಅಕ್ರಮ ಮರಳು ವಾಹನಗಳು ಸಹಿತ ಅನೇಕ ಅಕ್ರಮ ವಸ್ತುಗಳ ಸಾಗಾಟ ಮಾಡುವುದಕ್ಕೆ ಇದೊಂದು ಕಳ್ಳದಾರಿಯಾಗಿತ್ತು. ಇದೀಗ ಕಮಾನು ಅಳವಡಿಸಿ ಘನಗಾತ್ರ ವಾಹನ ಗಳಿಗೆ ಸಂಚಾರ ನಿರ್ಬಂಧಿಸಿದ ಪರಿಣಾಮ ಅಕ್ರಮ ಮರಳುಗಾರಿಕೆ, ಇತರ ಸಾಗಾಟಕ್ಕೆ ಕಡಿವಾಣ ಬೀಳಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News