ಗ್ರಾಮಾಂತರ ಪ್ರದೇಶಗಳಲ್ಲಿಯೂ ಎಟಿಎಂ ಸ್ಥಾಪಿಸಲು ಯೋಜನೆ-ಡಾ. ಎಂ.ಎನ್.ರಾಜೇಂದ್ರ ಕುಮಾರ್
ಪುತ್ತೂರು: ಪ್ರಸ್ತುತ ಸಹಕಾರಿ ಕ್ಷೇತ್ರಗಳೂ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ಹೋಗಬೇಕಾಗಿರುವುದು ಅನಿವಾರ್ಯವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆಯ ದೃಷ್ಟಿಯಿಂದ ಎಸ್‍ಸಿಡಿಸಿಸಿ ಬ್ಯಾಂಕ್‍ನಿಂದ ಎಟಿಎಂ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ 9 ಕಡೆಗಳಲ್ಲಿ ಎಟಿಎಂ ವ್ಯವಸ್ಥೆಗಳಿದ್ದು ಪುತ್ತೂರಿನಲ್ಲಿ ಇಂದು 10 ಎಟಿಎಂ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಎಟಿಎಂ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಅವರು ಸೋಮವಾರ ಎಸ್‍ಸಿಡಿಸಿಸಿ ಬ್ಯಾಂಕ್‍ನ ಪುತ್ತೂರು ಶಾಖಾ ಕಟ್ಟಡದಲ್ಲಿ ನೂತನವಾಗಿ ಆರಂಭಿಸಲಾದ ಎಟಿಎಂ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರಿಂದ ಪುತ್ತೂರಿನಲ್ಲಿ ಸ್ಥಾಪನೆಗೊಂಡಿದ್ದು, ಪುತ್ತೂರಿನಿಂದಲೇ ಸಹಕಾರಿ ಸಂಸ್ಥೆ ಆರಂಭಗೊಂಡಿದೆ. ಮೊಳಹಳ್ಳಿ ಶಿವರಾಯರು ಪುತ್ತೂರಿನಲ್ಲಿ ಹಾಕಿದ ಬುನಾದಿ ಇಂದು ಎತ್ತರಕ್ಕೆ ಬೆಳೆದಿದೆ. ಈಗಾಗಲೇ 111 ಶಾಖೆಗಳನ್ನು ಬ್ಯಾಂಕ್ ಹೊಂದಿದೆ. ಇನ್ನೆರಡು ಶಾಖೆಗಳು ಶೀಘ್ರದಲ್ಲಿ ಆರಂಭಗೊಳ್ಳಲಿದೆ. ನಮ್ಮ ಸಹಕಾರಿ ಬ್ಯಾಂಕ್ ನೀಡಿರುವ ಆರ್ಥಿಕ ಸಹಕಾರದ ಕಾರಣದಿಂದಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿಲ್ಲ. ನಮ್ಮ ಜಿಲ್ಲೆಯಲ್ಲಿ ರೈತರು ಪಡೆದುಕೊಂಡಿರು ಕೃಷಿ ಸಾಲವು ಶೇ. 100 ಮರುಪಾವತಿಯಾಗುತ್ತಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿನ ಪುರುಷರು ಮತ್ತು ಮಹಿಳೆಯರಿಗೆ ಹಾಗೂ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ವಿಭಾಗ ಮಟ್ಟದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲು ಚಿಂತನೆ ನಡೆಸಲಾಗಿದ್ದು, ಈ ಸ್ಪರ್ಧೆಯನ್ನು ಪುತ್ತೂರಿನಲ್ಲಿ ನಡೆಸಲಾಗುವುದು ಎಂದ ಡಾ. ರಾಜೇಂದ್ರ ಕುಮಾರ್ ಅವರು ಬೆಳೆಯುತ್ತಿರು ವ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬರಬೇಕಾದ ಅಗತ್ಯವಿದೆ. ಅಲ್ಲದೆ ನೂತನ ಸರ್ಕಾರವು ಗ್ರಾಮೀಣ ಮಟ್ಟದ ಜನರಿಗೆ ಆರೋಗ್ಯ ಸೇವೆ ಹೆಚ್ಚುಗೊಳಿಸುವ ಬಗ್ಗೆ ಯೋಜನೆ ರೂಪಿಸಬೇಕು, ಇದಕ್ಕಾಗಿ ಶಾಸಕ ಆಶೋಕ್ ರೈ ಅವರು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದರು.
ಎಟಿಎಂ ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಪುತ್ತೂರಿನಲ್ಲಿ ಹುಟ್ಟಿ ಬೆಳದೆ ಎಸ್‍ಸಿಡಿಸಿಸಿ ಬ್ಯಾಂಕ್ ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಸೇವೆ ನೀಡುತ್ತಿರುವುದು ಹೆಮ್ಮೆಯ ವಿಚಾರ. ಬ್ಯಾಂಕ್‍ನ ಅಚ್ಚುಕಟ್ಟುತನ, ಉತ್ತಮ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಪುತ್ತೂರಿನಲ್ಲಿ ಕೆಎಂಎಫ್‍ನ ಪೂರ್ಣ ಪ್ರಮಾಣದ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಈಗಾಗಲೇ 10 ಎಕ್ರೆ ಜಾಗವನ್ನು ಯೋಜನೆಗೆ ಮಂಜೂರುಗೊಳಿಸಲಾಗಿದೆ. ಕೆಎಂಎಫ್ ಪುತ್ತೂರಿಗೆ ಬಂದಲ್ಲಿ ಹಲವು ಮಂದಿಗೆ ಉದ್ಯೋಗ ಸಿಗಲಿದೆ ಮಾತ್ರವಲ್ಲದೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆದು ಈ ಭಾಗದಲ್ಲಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಬ್ಯಾಂಕ್‍ನ ನವೀಕೃತ ಡಿಆರ್ ಸೆಂಟರ್ ಉದ್ಘಾಟಿಸಿದ ಪುತ್ತೂರು ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಜನಸ್ನೇಹಿಯಾಗಿ ಸೇವೆ ನೀಡುತ್ತಿರುವ ಎಸ್‍ಸಿಡಿಸಿಸಿ ಬ್ಯಾಂಕ್‍ನ ಸಿಬ್ಬಂದಿಗಳ ಸ್ಪಂಧನೆ ಉತ್ತಮವಾಗಿದೆ. ಮೊಳಹಳ್ಳಿ ಶಿವರಾಯರ ಕಲ್ಪನೆಗಳನ್ನು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಬ್ಯಾಂಕನ್ನು ಬಹಳ ಎತ್ತರಕ್ಕೇರಿಸಿದ್ದಾರೆ ಸಾಕಾರಗೊಳಿಸಿದ್ದಾರೆ ಎಂದರು.
ಪುತ್ತೂರು ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿದರು. ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಬ್ಯಾಂಕ್‍ನ ಗ್ರಾಹಕರ ಠೇವಣಿ ಪತ್ರ ವಿತರಿಸಿದರು. ಎರಡು ನೂತನ ಸ್ವ ಸಹಾಯ ಸಂಘಕ್ಕೆ ಚಾಲನೆ ನೀಡಿದರು ಹಾಗೂ ಚೈತನ್ಯ ವಿಮಾ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್‍ನ ವತಿಯಿಂದ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ಗಣ್ಯರು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಪ್ರತಿಮೆಗೆ ಹಾರಾರ್ಪಣೆ ಮಾಡಿ ಗೌರವಿಸಿದರು.
ವೇದಿಕೆಯಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ರಾಜಾರಾಮ್ ಭಟ್, ಜಯರಾಜ್ ರೈ ಉಪಸ್ಥಿತರಿದ್ದರು. ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.