ಲೋಕಸಭೆ ಚುಣಾವಣೆ ಸಂದರ್ಭದ ಉಮ್ರಾ ಯಾತ್ರೆ ಮುಂದೂಡಲು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕರೆ
ಮಂಗಳೂರು : ಮತದಾನಕ್ಕೆ ಅನಾನುಕೂಲವಾಗುವಂತೆ ಏಪ್ರಿಲ್ 26ಕ್ಕಿಂತ ಮುಂಚೆ ನಿಗದಿ ಪಡಿಸಿದ ಎಲ್ಲಾ ಉಮ್ರಾ ಯಾತ್ರೆಗಳನ್ನು ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಸೂಚಿಸಿದ್ದಾರೆ.
ಈಗಾಗಲೇ ಚುನಾವಣಾ ಆಯೋಗವು ಹೆಚ್ಚಿನ ಮತದಾನ ನಡೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅತ್ಯಧಿಕ ಮತದಾನ ನಡೆಯಲು ನಾವೆಲ್ಲರೂ ಪ್ರಯತ್ನಿಸಬೇಕಿದೆ. ಮತದಾನವು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಅತ್ಯುನ್ನತ ಕರ್ತವ್ಯವಾಗಿದ್ದು, ದೇಶಕ್ಕೆ ಸುಭದ್ರ ಸರಕಾರ ಮತ್ತು ಉತ್ತಮ ಆಡಳಿತ ಸಿಗಲು ಪ್ರತಿಯೊಬ್ಬರು ಮತದಾನ ಮಾಡಬೇಕಿದೆ ಎಂದು ಹೇಳಿದ್ದಾರೆ.
ಎಲ್ಲ ಉಮ್ರಾ ಸಂಸ್ಥೆಗಳು, ಏಜೆಂಟರು ಏಪ್ರಿಲ್ 26ಕ್ಕಿಂತ ಮುಂಚೆ ನಿಗದಿಪಡಿಸಿರುವ ಎಲ್ಲಾ ಉಮ್ರಾ ಯಾತ್ರೆಗಳನ್ನು ರದ್ದುಪಡಿಸಿ, ಏಪ್ರಿಲ್ 27ರ ನಂತರ ತೆರಳಬೇಕು. ಈಗಾಗಲೇ ವಿಮಾನ ಟಿಕೇಟ್ ಬುಕ್ ಮಾಡಿದ್ದರೆ, ಅದನ್ನು ಮುಂದೂಡಬೇಕು. ಯಾತ್ರಾರ್ಥಿಗಳು ಯಾವುದೇ ಕಾರಣಕ್ಕೂ ಮತದಾನ ಮಾಡದೆ ಉಮ್ರಾ ತೆರಳಬಾರದು. ಈ ಬಗ್ಗೆ ಎಲ್ಲರೂ ಸಹಕರಿಸಬೇಕು. ಆಯಾ ಜಮಾಅತ್ ಕಮಿಟಿಗಳು ಶುಕ್ರವಾರ ದಿವಸ ಜುಮಾ ನಂತರ ಇಮಾಮರಲ್ಲಿ ಹೇಳಿ ಜನರಿಗೆ ಸಂದೇಶ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಸೂಚಿಸಿದ್ದನ್ನು ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಕಿನಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.