ಧರ್ಮದ ಹೆಸರಿನಲ್ಲಿ ಧಾರ್ಮಿಕ ಭಯೋತ್ಪಾದಕರ ರಕ್ಷಣೆ: ಮಹೇಶ್ ಶೆಟ್ಟಿ ತಿಮರೋಡಿ ಆರೋಪ

Update: 2023-09-24 16:34 GMT

ವಿಟ್ಲ: ಧರ್ಮದ ಹೆಸರಿನಲ್ಲಿ ಧಾರ್ಮಿಕ ಭಯೋತ್ಪಾದಕರನ್ನು ರಕ್ಷಣೆ ಮಾಡಲಾಗುತ್ತಿದೆ. ಸರ್ಕಾರ ಪ್ರಕರಣದ ಮರುತನಿಗೆ ಆದೇಶಿಸುವ ಕಾರ್ಯ ಮಾಡಲಿ. ಸಾಕ್ಷ್ಯ ನಾಶ ಮಾಡಿ ಪ್ರಕರಣ ಮುಚ್ಚಿಸಿದವರು ಹೊರ ಬರಬೇಕಿದೆ. ಪ್ರಕರಣದಲ್ಲಿ ಸತ್ಯವಿಲ್ಲದೇ ಹೋದಲ್ಲಿ ಹೋರಾಟ ಮಾಡಲು ಮುಂದಾದಾಗ ನ್ಯಾಯದೇವತೆ ಶಿಕ್ಷಿಸುವ ಕಾರ್ಯ ಮಾಡಬೇಕಿತ್ತು. ವಿಟ್ನೆಸ್ ನೀಡುವ ಕಾರ್ಯವನ್ನು ಮುಂದಿನ ದಿನದಲ್ಲಿ ನಡೆಲಿದೆ. ನ್ಯಾಯಾಲಯಕ್ಕೆ ಹೋಗದೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು, ರಸ್ತೆಯಲ್ಲಿ ಜನರನ್ನು ಒಟ್ಟು ಸೇರಿಸಿ ನ್ಯಾಯ ಭಿಕ್ಷೆ ಕೇಳಲಾಗುವುದು. ಸೌಜನ್ಯ ದೇವಿಸ್ವರೂಪವಾಗಿ ನಮ್ಮ ಜತೆಗೆ ಇರುವ ಕಾರಣ ಜನತ್ಸೋಮ ಸೇರಿದೆ ಎಂದು ಸೌಜನ್ಯ ನ್ಯಾಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

ಅವರು ರವಿವಾರ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ವಿಟ್ಲ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ದೈವ ಚಿಂತಕ ತಮ್ಮಣ್ಣ ಶೆಟ್ಟಿ ಮಾತನಾಡಿ ಅಧರ್ಮ ತಾಂಡವಾಡುತ್ತಿದ್ದು, ಮಣ್ಣಿನ ಸತ್ಯವನ್ನು ಉಳಿಸುವ ಕಾರ್ಯ ವಾಗಬೇಕು. ಕಾಲು ಮಂಡಲದಲ್ಲಿ ದೈವ ನ್ಯಾಯ ನೀಡುವ ಕಾರ್ಯ ಮಾಡುತ್ತದೆ. ತ್ಯಾಗ ಬಲಿದಾನ ಜಾಗದಲ್ಲಿ ವಿಕೃತಿ ಯನ್ನು ಮೆರೆದವರಿಗೆ ತಕ್ಕಶಾಸ್ತಿಯಾಗಬೇಕು. ಸ್ತ್ರೀಶಕ್ತಿ ತುಳುನಾಡನ್ನು ಕಟ್ಟಿದ ಶಕ್ತಿಯಾಗಿದೆ. ದುಷ್ಟ ಶಕ್ತಿ, ಕೂಟದ ವಿರುದ್ಧ ನಮ್ಮ ಹೋರಾಟವಾಗಿದೆ. ದೈವಾರಾಧನೆಯ ಪ್ರಕಾರ ಯಾವುದೇ ಸಾಕ್ಷ್ಯ ನಾಶವಾಗಿಲ್ಲ. ನ್ಯಾಯಾಲಯದಲ್ಲಿ ಸಿಗದ ನ್ಯಾಯ ದೈವದ ಮುಂದೆ ಲಭಿಸಿದೆ. ಮಲರಾಯಿಯ ನಡೆಯಲ್ಲಿ ತೀರ್ಮಾನ ಸಿಗಬಹುದು ಎಂಬ ನಂಬಿಕೆಯಿಂದ ವಿಟ್ಲಕ್ಕೆ ಬಂದಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಕಾರ್ಯ ಸರಿಯಲ್ಲ. ರಾಜಕೀಯ ವ್ಯಕ್ತಿಗಳ ನಿಲುವು ಸ್ಪಷ್ಟತೆ ಇರಬೇಕು ಎಂದು ತಿಳಿಸಿದರು.

ನ್ಯಾಯಪರ ಹೋರಾಟಗಾರ ಗಿರೀಶ್ ಮಠ್ಠಣ್ಣನವರ್ ಮಾತನಾಡಿ ಧರ್ಮವನ್ನು ಗುರಾಣಿಯಾಗಿ ಬಳಸಲಾಗುತ್ತಿದೆ. ಬೀದಿ ಹೋರಾಟಗಳನ್ನು ಮಾಡುತ್ತಿರುವ ಕಾರಣ ಎಲ್ಲರಿಗೆ ಧೈರ್ಯ ಬಂದಿದೆ ಮತ್ತು ಹೆಣಗಳು ಬೀಳುವುದು ಕಡಿಮೆಯಾಗಿದೆ. ಒಂದು ಸುಳ್ಳನ್ನು ಸಾವಿರ ಸಲ ಹೇಳದರೆ, ಸತ್ಯವಾಗಲು ಸಾಧ್ಯವಿಲ್ಲ. ಸೌಜನ್ಯನಂತೆ ನೂರಾರು ಮಂದಿಯ ಅತ್ಯಾಚಾರ ಸಾವು ಆಗಿದ್ದು, ಅದೆಲ್ಲದರ ತನಿಖೆ ನಡೆಯಬೇಕು. ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಿಲ್ಲಬೇಕು. ಈ ಹೋರಾಟ ಸರ್ಕಾರಗಳ ವಿರುದ್ಧವಲ್ಲ, ನ್ಯಾಯಕ್ಕಾಗಿ ಮಾತ್ರವಾಗಿದೆ. ತನಿಖೆ ಆರಂಭವಾದರೆ ಕಚೇರಿಯ ಮುಂದೆ ಸಾಕ್ಷ್ಯಗಳು ಕ್ಯೂವಿ ನಲ್ಲಿ ನಿಲ್ಲುತ್ತಾರೆ. ಮುಂದಿನ ದಿನ ಪತ್ರ ಚಳುವಳಿಯನ್ನು ಆರಂಭಿಸುವ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಬೇಕು ಎಂದು ಹೇಳಿದರು.

ಸೌಜನ್ಯ ತಾಯಿ ಕುಸುಮಾವತಿ ಹಾಗೂ ಕುಟುಂಬ ಸೆರಗೊಡ್ಡಿ ನ್ಯಾಯಕ್ಕಾಗಿ ಎಲ್ಲರ ಸಹಕಾರ ಬೇಡಿದರು. ವಿವಿಧ ಸಂಘಟನೆಗಳ ಸಹಕಾರದಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ರಥದ ಗದ್ದೆಯ ಬಳಿಯಿಂದ ವಿಟ್ಲ ಹಳೆ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು.

ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು, ಹಿರಿಯರಾದ ವೀರಪ್ಪ ಗೌಡ, ಉದ್ಯಮಿ ಸುರೇಶ್ ಶೆಟ್ಟಿ ಮುಂಬಯಿ ಮತ್ತಿತರರು ಉಪಸ್ಥಿತರಿದ್ದರು.

ಪುರಂದರ ಇಂದ್ರಪಡ್ಪು ಪ್ರಾರ್ಥಿಸಿದರು. ಸಮಿತಿ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಬೆಂಞನ್ತಿಮಾರು ಸ್ವಾಗತಿಸಿ, ಪ್ರಸ್ತಾವನೆಗೈದರು. ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News