ಮಂಗಳೂರು: ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ

Update: 2024-02-16 18:15 GMT

ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ರೈತ - ಕಾರ್ಮಿಕ - ಕೃಷಿ ಕೂಲಿಕಾರರು ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನೆ ನಡೆಸಿದರು.

ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ,ದುಡಿಯುವ ಜನರ ಶೋಷಣೆ ತಪ್ಪಿಸಬೇಕು, ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು,ಉದ್ಯೋಗ ಸೃಷ್ಠಿಸಲು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ನೀತಿ ಆಯೋಗದ ಪರಿಕಲ್ಪನೆಗಳು ಬದಲಾದ ಪರಿಣಾಮ ಇಂದಿನ ಆರ್ಥಿಕ ನೀತಿಗಳು ಉದ್ಯೋಗರಹಿತವಾಗಿ ಜಾರಿಯಾಗುತ್ತಿವೆ. ಉತ್ಪಾದನಾ ವಲಯದಲ್ಲಿ ಇದೇ ಮೊದಲ ಬಾರಿಗೆ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಕುಸಿದಿದೆ. ಉದ್ಯೋಗಸ್ಥರ ಬದಲಾಗಿ ಗುತ್ತಿಗೆ ಹೊರಗುತ್ತಿಗೆ ತಾತ್ಕಾಲಿಕ ಉದ್ಯೋಗಗಳು ಹೆಚ್ಚಾಗಿದೆ. ಬಂಡವಾಳಶಾಹಿಗಳ ಪರವಾಗಿ ಕಾರ್ಮಿಕ ಕಾನೂನುಗಳನ್ನು ಬದಲಿಸಿ ಸಂಹಿತೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರದ ನೀತಿಗಳು ಕಾರ್ಮಿಕ ವರ್ಗದ ಬದುಕಿನ ಮೇಲೆ ಪ್ರಹಾರಗಳನ್ನು ನಡೆಸಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, "ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ಒದಗಿಸಬೇಕಾದ ಕೇಂದ್ರ ಸರಕಾರ ಪ್ರತಿಯೊಂದು ಹಂತದಲ್ಲಿಯೂ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭವಾಗುವ ನೀತಿಗಳನ್ನು ಜಾರಿಗೊಳಿಸುತ್ತಿದೆ" ಎಂದು ಆರೋಪಿಸಿದರು.

ಸಭೆಯನ್ನುದ್ದೇಶಿಸಿ ರಾಜ್ಯ ರೈತ ಸಂಘದ ನಾಯಕರಾದ ಸನ್ನಿ ಡಿಸೋಜ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಯಾದವ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ನಾಯಕರಾದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಸುಕುಮಾರ್,ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ಜಯಂತಿ ಶೆಟ್ಟಿ, ವಸಂತಿ ಕುಪ್ಪೆಪದವು, ರಾಧಾ ಮೂಡಬಿದ್ರೆ, ಗಿರಿಜಾ, ನೋಣಯ್ಯ ಗೌಡ, ರೋಹಿದಾಸ್,ಸುಂದರ ಕುಂಪಲ,ಬಿ.ಕೆ.ಇಮ್ತಿಯಾಝ್ ಎಐಟಿಯುಸಿ ಜಿಲ್ಲಾ ಮುಖಂಡರಾದ ಬಿ.ಶೇಖರ್,ವಿ.ಕುಕ್ಯಾನ್,ಎಚ್.ವಿ.ರಾವ್,ಕರುಣಾಕರ್,ಸುರೇಶ್ ಕುಮಾರ್,ಸುಲೋಚನ, ರೈತ ಸಂಘಟನೆಗಳ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್,ಓಸ್ವಾಲ್ಡ್ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News