ಫೆ.13ರಂದು ಹೊರಗುತ್ತಿಗೆ ನೌಕರರ ನೇರ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

Update: 2024-02-10 09:55 GMT

ಮಂಗಳೂರು, ಫೆ.10: ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರಚಾಲಕರು, ವಾಟರ್‌ಮ್ಯಾನ್, ಲೋಡರ್ಸ್, ಕ್ಲೀನರ್ಸ್‌, ಹೆಲ್ಪರ್ಸ್‌, ಯುಜಿಡಿ ಕಾರ್ಮಿಕರು ಸೇರಿದಂತೆ ಎಲ್ಲ ಬಗೆಯ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು ಹಾಗೂ ಬಾಕಿ ಇರುವ ಪೌರಕಾರ್ಮಿಕ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಫೆ.13ರಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ಫೆ.15ರಂದು ‘ನಮ್ಮ ನಡಿಗೆ ಮುಖ್ಯಮಂತ್ರಿ ಮನೆ ಕಡೆಗೆ’ ಎನ್ನುವ ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆಗೆ ಸಾಗಲಿದ್ದೇವೆ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗ ಸಂಚಾಲಕ ಬಿ.ಕೆ.ಅಣ್ಣಪ್ಪ ತಿಳಿಸಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರ ಬೇಡಿಕೆಗಳಿಗೆ ಸರ್ಕಾರದಿಂದ ಸೂಕ್ತರೀತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ. ನೌಕರರನ್ನು ನೇರಪಾವತಿಗೆ ಒಳಪಡಿಸುವುದರಿಂದ ಸರಕಾರಕ್ಕೆ ಜಿಎಸ್‌ಟಿ ಉಳಿತಾಯದ ಜತೆಗೆ ನೌಕರರಿಗೆ ಸೇವಾ ಭದ್ರತೆಯೂ ದೊರೆಯಲಿದೆ. 2022ರ ಜು.1ರಂದು ಅಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕರನ್ನು ನೇರ ಪಾವತಿಗೆ ತರಲು ಅಗತ್ಯ ತೀರ್ಮಾನ ಆಗಿದೆ. ಆದರೆ ಅಧಿಕಾರಿಗಳ ತಾರತಮ್ಯ ನೀತಿಯಿಂದ ಇದು ಜಾರಿಗೆ ಬರುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಈಗಾಗಲೇ 24 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗಿದ್ದು, ಇನ್ನುಳಿದ 25 ಸಾವಿರಕ್ಕೂ ಅಧಿಕ ಮಂದಿಯನ್ನು ಕಾಯಂಗೊಳಿಸಬೇಕು. ಎಲ್ಲ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಅಗತ್ಯಕ್ಕನುಗುಣವಾಗಿ ಪೌರಚಾಲಕ ಹುದ್ದೆಗಳನ್ನು ಸೃಷ್ಟಿಸಬೇಕು. ಸಂಕಷ್ಟ ಭತ್ಯೆಯನ್ನು ನೇರಪಾತಿ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿ ಸ್ವಚ್ಛತೆ ಹಾಗೂ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಿ ಹೋರಾಟ ನಡೆಯಲಿದೆ ಎಂದರು.

ಸಂಘಟನೆಯ ಪ್ರಮುಖರಾದ ವಿಜಯ್ ಬಂಟ್ವಾಳ, ಕಿರಣ್ ಮೂಡುಬಿದಿರೆ, ಪುರುಷೋತ್ತಮ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News