ಪುತ್ತೂರು: ಬಾಲವನದಲ್ಲಿ ಡಾ. ಕೋಟಾ ಶಿವರಾಮ ಕಾರಂತರ ಜನ್ಮದಿನೋತ್ಸವ

Update: 2023-10-10 14:13 GMT

ಪುತ್ತೂರು: ಪುತ್ತೂರಿನ ಬಾಲವನವು ಡಾ.ಶಿವರಾಮ ಕಾರಂತರ ಕರ್ಮಕ್ಷೇತ್ರವಾಗಿದೆ. ಇಲ್ಲಿರುವ ಸಂದರ್ಭದಲ್ಲಿಯೇ ಅವರ ಎಲ್ಲಾ ಕೃತಿಗಳು ರಚನೆಗೊಂಡಿದ್ದವು. ವ್ಯಕ್ತಿಗತ ಅನುಭವವು ತನ್ನ ಕೃತಿಯಲ್ಲಿ ಬರುವಂತೆ ನೋಡಿಕೊಂಡಿದ್ದ ಕಾರಂತರ ಎಲ್ಲಾ ಪ್ರಯೋಗಗಳಿಗೆ ಈ ಬಾಲವನ ನೆಲೆ ಮನೆಯಾಗಿದೆ ಎಂದು ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಹೇಳಿದರು.

ಅವರು ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ ಕೋಟ ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ಮಂಗಳವಾರ ಪುತ್ತೂರಿನ ಪರ್ಲಡ್ಕ ಬಾಲವನದಲ್ಲಿ ನಡೆದ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಡಾ. ಶಿವರಾಮ ಕಾರಂತರ ಬಾಲ ವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರಂತ ಸ್ಮರಣೆ ಮಾಡಿದರು. ಡಾ. ಶಿವರಾಮ ಕಾರಂತರ ನಿಧನದಿಂದಾಗಿ ಯುಗದ ಚೈತನ್ಯ ಮತ್ತು ಭೂಪ್ರದೇಶದ ಚೈತನ್ಯ ಅಸ್ತಂಗತವಾಯಿತು. ಬದುಕಿನುದ್ದಕ್ಕೂ ಬರವಣಿಗೆಯಲ್ಲಿ ತೊಡಗಿಸಿ ಕೊಂಡಿದ್ದ ಕಾರಂತರ ಒಂದೊಂದು ಕೃತಿಯೂ ಒಂದೊಂದು ವಿದ್ಯಾಲಯವಾಗಿದೆ. ಪ್ರಾದೇಶಿಕ ನೆಲೆ ಮತ್ತು ವಾಸ್ತವ ನೆಲೆ ಯಲ್ಲಿ ರಚನೆಗೊಂಡ ಕೃತಿಗಳು ಅವರದ್ದು, ಯಕ್ಷಗಾನ ಕಲಾರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಹೆಗ್ಗಳಿಕೆ ಕಾರಂತರದ್ದಾಗಿದೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಡಾ. ಶಿವರಾಮ ಕಾರಂತರು ಉಪದೇಶ ಕಡಿಮೆ ಮಾಡಿ ಉತ್ತಮವಾಗಿ ಬದುಕಿ ತೋರಿಸಿ ಎಂದು ಹೇಳಿದ್ದರು. ಅನುಸರಣಾ ಯೋಗ್ಯವಾದ ಬದುಕು ಅವರದ್ದಾಗಿತ್ತು. ಪುತ್ತೂರಿನ ಬಾಲವನವನ್ನು ಕಾರಂತರ ಆಶಯಕ್ಕೆ ಅನುಗುಣವಾಗಿ ಹಾಗೂ ಅವರ ಕೆಲಸ ಕಾರ್ಯಗಳಿಗೆ ಪೂರಕವಾಗಿ ಅಭಿವೃದ್ಧಿ ಪಡಿಸಲಾಗುವುದು. ಎಲ್ಲರೊಂದಿಗೆ ಚರ್ಚೆ ನಡೆಸಿ ಬಾಲವನ ಅಭಿ ವೃದ್ಧಿ ಯೋಜನೆಯ ಪ್ರಸ್ತಾಪ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ವರ್ಣ ಚಿತ್ರಕಲಾ ವಿದ ಪುತ್ತೂರು ಮೂಲದ ಕೆ. ಚಂದ್ರಕಾಂತ ಆಚಾರ್ಯ ಇವರಿಗೆ ದಿ| ಕುರುಂಜಿ ವೆಂಕಟರಮಣ ಗೌಡ ಅವರ ಶಾಶ್ವತ ಕೊಡುಗೆಯಲ್ಲಿ ಕೊಡ ಮಾಡುವ ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಅತಿಥಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಿದರು. ಪ್ರಶಸ್ತಿ ಸಮಿತಿಯ ಸದಸ್ಯರಾಗಿರುವ ಬೆಟ್ಟಂಪಾಡಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ ಅಭಿನಂದನಾ ಮಾತುಗಳನ್ನಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಕಾಂತ ಆಚಾರ್ಯ ಅವರು ಹಲವಾರು ಮಹಾನುಭಾವರನ್ನು ಪಡೆದಿರುವ ಪುತ್ತೂರಿನ ಮಣ್ಣಿಗೆ ವಿಶೇಷತೆಯಿದೆ. ಬಾಲ್ಯದ ಅವಧಿಯಲ್ಲಿ ಇದೇ ಪರಿಸರದಲ್ಲಿ ಓಡಾಡುತ್ತಿದ್ದ ನಾನು ಶಿವರಾಮ ಕಾರಂತ ರನ್ನು ಬಲ್ಲವನಾಗಿದ್ದೆ. ನನ್ನ ಡ್ರಾಯಿಂಗ್ ಪುಸ್ತಕದಲ್ಲಿ ನಾನು ಬಿಡಿಸಿದ ಮರದ ಚಿತ್ರವನ್ನು ನೋಡಿದ ಕಾರಂತರು ಮೊದಲು ಮರದ ಅಡಿಯಲ್ಲಿ ಹೋಗಿ ನಿಂತು ಅನುಭವಿಸಿದ ಬಳಿಕ ಚಿತ್ರ ಬಿಡಿಸು ಎಂದು ಹೇಳಿದ್ದರು. ಅವರ ಬರವಣಿಗೆ, ಚಿತ್ರ ಸಹಿತ ಎಲ್ಲವೂ ಅನುಭವಿಸಿದ ಬಳಿಕ ರಚನೆಗೊಂಡಿದ್ದವು. ಸಂವಹನೆಯಿಲ್ಲದೆ ನಾವಾಡಿದ ಭಾಷೆಗಳು ಉಳಿದವರಿಗೆ ಅರ್ಥವಾಗ ದಿದ್ದಲ್ಲಿ ಎಲ್ಲವೂ ವ್ಯರ್ಥವಾಗಲಿದೆ ಎಂದ ಅವರು ನನ್ನೂರಿನ ಜನ ನನ್ನನ್ನು ಗುರುತಿಸಿ ನೀಡಿರುವ ಈ ಪ್ರಶಸ್ತಿಯು ಪಾರಿ ತೋಶಕವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ಕಾರಂತರ ಒಡನಾಡಿ ಹಾಗೂ ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಅವರನ್ನು ಅಭಿನಂದಿಸಿ ಗೌರವಾರ್ಪಣೆ ಮಾಡಲಾಯಿತು.

ವೇದಿಕೆಯಲ್ಲಿ ಪುತ್ತೂರು ತಹಸೀಲ್ದಾರ್ ಶಿವಶಂಕರ್, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವೂರು ಸೀತಾರಾಮ ರೈ, ಕಸಾಪ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಉಪಸ್ಥಿತರಿದ್ದರು.

ಬಾಲವನ ಅಭಿವೃದ್ಧಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಬಿ ವಂದಿಸಿದರು. ಉಪನ್ಯಾಸಕ ಡಾ. ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರ್ವಹಿಸಿದರು. ಬಾಲವನ ಉಸ್ತುವಾರಿ ಜಗನ್ನಾಥ ಅರಿಯಡ್ಕ, ಶಿಕ್ಷಕ ರಮೇಶ್ ಉಳಯ ಸಹಕರಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಮೂಕಾಂಬಿಕ ಕಲ್ಚರಲ್ ಅಕಾಡಮಿಯ ವತಿಯಿಂದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಮತ್ತು ಬಳಗದಿಂದ `ಭರತನಾಟ್ಯ' ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ತಾರನಾಥ ಅವರ ನಿರ್ದೇಶನದಲ್ಲಿ `ಕೃಷ್ಣ ಲೀಲೆ' ಎಂಬ ಯಕ್ಷಗಾನ ಪ್ರದರ್ಶನ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಹಿರಿಯ ರಂಗ ಕಲಾವಿದ ಐ.ಕೆ ಬೋಳುವಾರುವರ ನಿರ್ದೇಶನದಲ್ಲಿ `ಕಾರಂತಜ್ಜನಿಗೊಂದು ಪತ್ರ' ಎಂಬ ಮಕ್ಕಳ ನಾಟಕ ಮತ್ತು ಮಹಿಳಾ ಯಕ್ಷ ಬಳಗ ಬಾಲವನ ಪುತ್ತೂರು ಇವರಿಂದ ಶಾಲಿನಿ ಅರುಣ್ ಶೆಟ್ಟಿ ಇವರ ಸಂಯೋಜನೆಯಲ್ಲಿ `ವೀರಮಣಿ ಕಾಳಗ' ಎಂಬ ಮಹಿಳಾ ಯಕ್ಷಗಾನ ಪ್ರದರ್ಶನಗೊಂಡಿತು.

 ಬಾಲವನ ಪ್ರಶಸ್ತಿ ಪುರಸ್ಕೃತರಾದ ಕೆ. ಚಂದ್ರನಾಥ ಆಚಾರ್ಯ ಇವರ ಸುಮಾರು 40ಕ್ಕೂ ಅಧಿಕ ಅಪೂರ್ವ ಕಲಾಕೃತಿ ಗಳನ್ನು ಬಾಲನದಲ್ಲಿನ ಕಾರಂತರ ಗ್ರಂಥಾಲಯದ ಕಟ್ಟಡದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು. ಬಾಲವನ ದಲ್ಲಿರುವ ಆರ್ಟ್ ಗ್ಯಾಲೇರಿಯಲ್ಲೂ ಚಿತ್ರಕಲೆಗಾರರ ಕಲಾಕೃತಿಗಳು ಪ್ರದರ್ಶನವಿತ್ತು. ಡಾ.ಶಿವರಾಮ ಕಾರಂತರ ಜ್ಞಾನ ಪೀಠ ಪ್ರಶಸ್ತಿಯನ್ನು ಕಾರಂತರ ಮನೆಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News