ಪುತ್ತೂರು: ಅಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ; ಪ್ರಕರಣ ದಾಖಲು
ಪುತ್ತೂರು: ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸೊತ್ತುಗಳಿಗೆ ಹಾನಿ ಮಾಡಿದ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ದೊಡ್ಡಡ್ಕ ನಿವಾಸಿ ಸಂಕಪ್ಪ ಪೂಜಾರಿ ಎಂಬವರಿಗೆ ಸೇರಿದ ಅಂಗಡಿಗೆ ಬೆಂಕಿ ಹಚ್ಚಿ ಹಾನಿಗೊಳಿಸಲಾಗಿದೆ. ಸಂಕಪ್ಪ ಪೂಜಾರಿ ಅವರು ಇಲ್ಲಿ ಸಣ್ಣ ಗೂಡಂಗಡಿ ಮತ್ತು ಟೀ ಸ್ಟಾಲ್ ಜೊತೆಯಾಗಿ ನಡೆಸುತ್ತಿದ್ದರು. ಪ್ರತಿದಿನ ಸಂಜೆಯ ತನಕ ವ್ಯಾಪಾರ ನಡೆಸುತ್ತಿದ್ದ ಅವರು ಬಳಿಕ ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದರು. ಎಂದಿನಂತೆ ಗುರುವಾರವೂ ಸಂಜೆಗೆ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು. ತಡರಾತ್ರಿ ಯಾರೋ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಅಂಗಡಿಯಲ್ಲಿನ ಸೊತ್ತುಗಳು ಸಂಪೂರ್ಣ ಸುಟ್ಟು ಹೋಗಿದ್ದು ಹಾನಿಯಾಗಿದೆ.
ಸಂಪ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಲು ಯತ್ನ
ನಗರದ ಮಾಯ್ ದೇ ದೇವುಸ್ ಚರ್ಚ್ ಬಿಲ್ಡಿಂಗ್‍ನಲ್ಲಿರುವ ಫ್ಯಾನ್ಸಿ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಲು ವಿಫಲ ಯತ್ನ ನಡೆಸಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಇಲ್ಲಿನ ರಫೀಕ್ ಎಂಬವರ ಮಾಲಕತ್ವದ ಬ್ಲ್ಯಾಕ್ ಡೈಮಂಡ್ ಹೆಸರಿನ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಲು ಯತ್ನ ನಡೆಸಲಾ ಗಿದೆ. ಹೆಲ್ಮೆಟ್ ಧರಿಸಿಕೊಂಡು ಬಂದ ವ್ಯಕ್ತಿಯು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ದುಷ್ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಅಂಗಡಿಯ ಶಟರ್ ಮುಚ್ಚಿದ್ದು ಹೊರಗಿನಿಂದ ಬೆಂಕಿ ಹಚ್ಚಿಸಿದ ಕಾರಣ ಒಳಭಾಗ ದಲ್ಲಿ ಹೆಚ್ಚಿನ ಅಪಾಯಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.