ಪುತ್ತೂರು: ಯುವತಿಯ ಕೊಲೆ ಪ್ರಕರಣ; ಪೊಲೀಸರಿಂದ ಸ್ಥಳ ಮಹಜರು

Update: 2023-08-25 15:58 GMT

ಪುತ್ತೂರು : ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಗುರುವಾರ ಮಧ್ಯಾಹ್ನ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿ ಪದ್ಮರಾಜ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಶುಕ್ರವಾರ ಆತನನ್ನು ಕೊಲೆಕೃತ್ಯ ನಡೆದ ಸ್ಥಳಕ್ಕೆ ಹಾಗೂ ಆಕೆಯೊಂದಿಗೆ ಜಗಳವಾಡಿದ್ದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಟ್ಟಡದ ಅಂಗಡಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು.

ಬಂಟ್ವಾಳ ತಾಲೂಕಿನ ಅಳಿಕೆ ಸಮೀಪದ ಕುದ್ದುಪದವು ಆದಾಳ ನಿವಾಸಿ ರವೀಂದ್ರ ಮಣಿಯಾಣಿ ಅವರ ಪುತ್ರಿ ಗೌರಿ (18) ಎಂಬಾಕೆಯನ್ನು ಮೂಲತಃ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೈಬೇಲು ನಿವಾಸಿಯಾಗಿದ್ದು, ಕಳೆದ 3 ವರ್ಷಗಳಿಂದ ವೇಣೂರಿನಲ್ಲಿ ವಾಸ್ತವ್ಯವಿದ್ದ ಪದ್ಮರಾಜ್ (23) ಎಂಬಾತ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿಯಲ್ಲಿ ಕೊಲೆ ನಡೆಸಿದ್ದ.

ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಮಹಾಲಿಂಗೇಶ್ವರ ದೇವಳದ ದ್ವಾರದ ಬಳಿ ಗೌರಿ ಇದ್ದ ವೇಳೆ ಬೈಕಿನಲ್ಲಿ ಬಂದಿದ್ದ ಆರೋಪಿ ಪದ್ಮರಾಜ್ ಏಕಾಏಕಿಯಾಗಿ ಆಕೆಯನ್ನು ಠಾಣೆಯ ಗೋಡೆಯ ಬದಿಯ ದ್ವಾರದ ಕಂಬಕ್ಕೆ ಒತ್ತಿ ಹಿಡಿದು ಚೂರಿಯಿಂದ ಕತ್ತು ಸೀಳಿ, ಕುಸಿದು ನೆಲದ ಮೇಲೆ ಬಿದ್ದ ಆಕೆಯ ಹೊಟ್ಟೆಯ ಮೇಲೆ ಕುಳಿತು ಮತ್ತೆ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ತಿವಿದಿದ್ದ. ಈ ದೃಶ್ಯವನ್ನು ಕಂಡ ದೇವಳದಿಂದ ಬರುತ್ತಿದ್ದ ಭಕ್ತರೊಬ್ಬರು ಬೊಬ್ಬೆ ಹೊಡೆಯುತ್ತಿದ್ದಂತೆಯೇ ಆರೋಪಿ ಹಂತಕ ಚಾಕು ತೋರಿಸಿ ತುಳುವಿನಲ್ಲಿ `ಎದುರು ಬಂದರೆ ನಿಮ್ಮನ್ನೂ ಕೊಲ್ಲುತ್ತೇನೆ' ಎಂದು ಗದರಿಸುತ್ತಾ, ಕೃತ್ಯಕ್ಕೆ ಬಳಸಿದ ಚೂರಿಯನ್ನು ಅಲ್ಲೇ ಎಸೆದು ತಾನು ಬಂದಿದ್ದ ಬೈಕ್ ಏರಿ ಅಲ್ಲಿಂದ ಪರಾರಿಯಾಗಿದ್ದ. ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗಳಾದ ಗೌರಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಆಕೆ ದಾರಿ ಮಧ್ಯೆ ಮೃತಪಟ್ಟಿದ್ದರು.

ಗೌರಿ ಮೊಬೈಲ್ ಕಿತ್ತುಕೊಂಡಿದ್ದ ಪದ್ಮರಾಜ್

ಗೌರಿ ಅವರು ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಟ್ಟಡದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹತ್ಯೆಗೆ ಮೊದಲು ಅಲ್ಲಿಗೆ ಆಗಮಿಸಿದ್ದ ಆರೋಪಿ ಪದ್ಮರಾಜ್ ಅಂಗಡಿಯೊಳಗೆ ಬಂದು ಗೌರಿ ಅವರಲ್ಲಿ ಎರಡು ಮೊಬೈಲ್‍ಗಳಿರುವ ವಿಚಾರದಲ್ಲಿ ಆಕೆಯೊಂದಿಗೆ ಜಗಳವಾಡಿದ್ದ. ಆ ವೇಳೆ ಅಂಗಡಿ ಮಾಲಕರು ಹೊರಗೆ ಹೋಗಿ ಮಾತನಾಡುವಂತೆ ಸೂಚಿಸಿದ್ದರು. ಅಂಗಡಿಯೊಳಗಿಂದಲೇ ಗೌರಿ ಅವರು ತಾಯಿಗೆ ಕರೆಮಾಡಿ ಮಾತನಾಡತೊಡಗಿದ್ದು, ಆ ವೇಳೆ ಆರೋಪಿ ಪದ್ಮರಾಜ್ ಆಕೆಯ ಕೈಯಲ್ಲಿದ್ದ ಮೊಬೈಲ್ ಒಂದನ್ನು ಕಿತ್ತುಕೊಂಡು ಹೋಗಿದ್ದ. ಈ ಹಿನ್ನಲೆಯಲ್ಲಿ ಗೌರಿ ಅವರು ಅಂಗಡಿಯೊಳಗಿಂದ ಕಣ್ಣೀರಿಡುತ್ತಾ ಹೊರ ಹೋಗಿದ್ದರು. ಈ ದೃಶ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಜಗಳವಾಡಿ ಮೊಬೈಲ್ ಕಿತ್ತುಕೊಂಡು ಹೋದ ವಿಚಾರದಲ್ಲಿ ಗೌರಿ ಅವರು ಪದ್ಮರಾಜ್‍ಗೆ ಹಲವು ಬಾರಿ ಕರೆ ಮಾಡಿ ಮೊಬೈಲ್ ಕೊಡುವಂತೆ ಕೇಳಿಕೊಂಡಿದ್ದರು. ಮೊಬೈಲ್ ಕಿತ್ತುಕೊಂಡು ಮಾಣಿ ತನಕ ಹೋಗಿದ್ದ ಆರೋಪಿ ಚಾಕೊಂದನ್ನು ಖರೀದಿಸಿಕೊಂಡು ಗೌರಿ ಅವರು ಮಹಿಳಾ ಪೊಲೀಸ್ ಠಾಣೆಯ ಬಳಿಯಿದ್ದ ಸಂದರ್ಭ ಅಲ್ಲಿಗೆ ಬಂದು ಏಕಾಏಕಿಯಾಗಿ ಹತ್ಯೆ ಮಾಡಿದ್ದಾನೆ. ಗೌರಿ ಅವರು ಆತನ ವಿರುದ್ಧ ದೂರು ನೀಡಲು ಮಹಿಳಾ ಪೊಲೀಸ್ ಠಾಣೆಯ ಬಳಿಗೆ ಹೋಗಿರಬಹುದೆಂದು ಶಂಕಿಸಲಾಗಿದೆ. ಆರೋಪಿ ಕೃತ್ಯ ಎಸಗಿ ಮರಳಿ ಬೈಕ್‍ನಲ್ಲಿ ತೆರಳುತ್ತಿರುವುದು ಮಹಿಳಾ ಪೊಲೀಸ್ ಠಾಣೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೌರಿ ಕಳೆದ ಕೆಲ ಸಮಯಗಳಿಂದ ಇನ್ನೋರ್ವ ಯುವಕನ ಸಂಪರ್ಕದಲ್ಲಿದ್ದಾಳೆ ಎಂಬ ಪದ್ಮರಾಜ್ ಸಂಶಯವೇ ಹತ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ತನ್ನ ಮೊಬೈಲ್ ಕರೆಯನ್ನು ಗೌರಿ ಸ್ವೀಕರಿಸದ ಹಿನ್ನಲೆಯಲ್ಲಿ ಪದ್ಮರಾಜ್ ಈ ಬಗ್ಗೆ ವಿಚಾರಿಸಲೆಂದೇ ಪುತ್ತೂರಿನಲ್ಲಿ ಗೌರಿ ಅವರು ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದಿದ್ದ. ಈ ಆಕ್ರೋಶದಿಂದಲೇ ತಾನು ನೀಡಿದ್ದ ಮೊಬೈಲನ್ನು ಆಕೆಯ ಕೈಯಿಂದ ಕಿತ್ತುಕೊಂಡು ಹೋಗಿದ್ದ. ಅಲ್ಲದೆ ತಾನು ನಿನಗಾಗಿ ಖರ್ಚು ಮಾಡಿದ್ದ ರೂ.2ಲಕ್ಷಕ್ಕೂ ಅಧಿಕ ಹಣವನ್ನು ಹಿಂತಿರುಗಿಸುವಂತೆ ಪೀಡಿಸಿದ್ದ. ಈ ವಿಚಾರವನ್ನು ಯುವತಿ ಆಕೆಯ ತಾಯಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿರುವುದರಿಂದ ಇನ್ನಷ್ಟು ಆಕ್ರೋಶಗೊಂಡು ಕೊಲೆ ಮಾಡುವ ನಿರ್ಧಾರ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News