ದ.ಕ. ಮುಂಗಾರು ಪೂರ್ವ ಮಳೆ ಪ್ರಮಾಣದಲ್ಲಿ ತುಸು ಇಳಿಕೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಪ್ರಮಾಣದಲ್ಲಿ ತುಸು ಇಳಿಕೆ ಕಂಡು ಬಂದಿದೆ. ಶುಕ್ರವಾರ ಹಗಲು ಮೋಡ ಕವಿದ ವಾತಾವರಣವಿತ್ತು. ರಾತ್ರಿ ವೇಳೆ ಸ್ವಲ್ಪ ಮಳೆಯಾಗಿದೆ.
ಜಿಲ್ಲೆಯಲ್ಲಿ ಗರಿಷ್ಠ 32.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ನೈಋತ್ಯ ಮಾನ್ಸೂನ್ ಶುಕ್ರವಾರ ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮುಂದುವರಿದಿದೆ. ಹಾಗಾಗಿ ಮೇ 25ರಿಂದ 29ರವರೆಗೆ ಜಿಲ್ಲೆಯಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸೂಚನೆ ಇದೆ. ಮೇ 25ರಂದು ಭಾರತೀಯ ಹವಾಮಾನ ಇಲಾಖೆಯು ಎಲ್ಲೋ ಅಲರ್ಟ್ ಘೋಷಿಸಿದೆ.
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನವರೆಗೆ ಮುಲ್ಕಿಯಲ್ಲಿ ಗರಿಷ್ಠ 42.3 ಮಿಮೀ. ಮಳೆಯಾಗಿದೆ. ದಿನದ ಸರಾಸರಿ ಮಳೆ 8.6 ಮಿ.ಮೀ. ದಾಖಲಾಗಿದೆ. ಬೆಳ್ತಂಗಡಿ 4.6 ಮಿ.ಮೀ, ಬಂಟ್ವಾಳ 4.9 ಮಿ.ಮೀ, ಮಂಗಳೂರು 11.2 ಮಿ.ಮೀ, ಪುತ್ತೂರು 8.2 ಮಿ.ಮೀ, ಸುಳ್ಯ 17.3 ಮಿ.ಮೀ, ಮೂಡುಬಿದಿರೆ 14.5 ಮಿ.ಮೀ, ಕಡಬ 4.3 ಮಿ.ಮೀ, ಉಳ್ಳಾಲ 3.7 ಮಿ.ಮೀ. ಮಳೆ ದಾಖಲಾಗಿದೆ.