ಸುರತ್ಕಲ್‌: ಗಣೇಶೋತ್ಸವ ಮತ್ತು ಮೀಲಾದುನ್ನಬಿ ಪ್ರಯುಕ್ತ ಸಾರ್ವಜನಿಕ ಶಾಂತಿ ಸಭೆ

Update: 2023-09-13 17:19 GMT

ಸುರತ್ಕಲ್‌, ಸೆ.13: ಮಂಗಳೂರು ನಗರ ಪೊಲೀಸ್‌ ಪಣಂಬೂರು ಉತ್ತರ ವಿಭಾಗದ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮತ್ತು ಮೀಲಾದುನ್ನಬಿ ಪ್ರಯುಕ್ತ ಸಾರ್ವಜನಿಕ ಶಾಂತಿ ಸಭೆಯು ಬುಧವಾರ ಸುರತ್ಕಲ್‌ನ ಸೆಕ್ರಡ್ ಹಾರ್ಟ್‌ ಚರ್ಚ್‌ನ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷ ಮಹೇಶ್ ಪ್ರಸಾದ್‌ ಅವರು ವಹಿಸಿ ಮಾತನಾಡಿ, ಹಬ್ಬಗಳನ್ನು ಸೌಹಾರ್ದದಿಂದ ಆಚರಿಸುವಂತಾಗಬೇಕು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಅಗತ್ಯವಿರುವ ಮತ್ತು ಸಂಬಂಧ ಪಟ್ಟ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದು ಕೊಳ್ಳಬೇಕು. ಆ ಬಳಿಕ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ನುಡಿದರು.

ಜೊತೆಗೆ ಗಣಪತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಮತ್ತು ಶೋಭಾಯಾತ್ರೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನಿಯೋಜಿಸಬೇಕು ಮತ್ತು ಯಾವುದೇ ಸಂದರ್ಭಗಳಲ್ಲಿ ಪೊಲೀಸ್‌ ಇಲಾಖೆಯ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ನುಡಿದರು. ಶೋಭಾಯಾತ್ರೆ ನಡೆಸುವಾಗ ಮತ್ತು ಗಣೇಶ ಮೂರ್ತಿಗಳ ವಿಸರ್ಜನೆಯ ಸಂದರ್ಭಗಳಲ್ಲಿ ಮದ್ಯ ಸೇವಿಸದ ಯುವಕರನ್ನು ಬಳಸಿಕೊಳ್ಳಬೇಕು. ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಪೆಂಡಾಲ್ಗಳನ್ನು ಹಾಕುವಾಗ ಕಡ್ಡಾಯವಾಗಿ ಅಗ್ನಿ ನಿರೋಧಕ ಸಾಮಾಗ್ರಿಗಳನ್ನು ಬಳಸಬೇಕು ಮತ್ತು ಅಗ್ನಿ ಶಾಮಕ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.

ಇನ್ನು ಮೀಲಾದುನ್ನಬಿ ಕುರಿತು ಚರ್ಚಿಸಿದ ಮಹೇಶ್‌ ಪ್ರಸಾದ್‌ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಉತ್ತಮ ರೀತಿಯಲ್ಲಿ ರ್ಯಾಲಿಗಳು ನಡೆಯಿತ್ತಿವೆ. ಇಡ್ಯಾ ಖಿಲ್ರಿಯಾ ಮಸೀದಿಯ ವತಿಯಿಂದ ನಡೆಸಲಾಗುವ ಮೆರವಣಿಗೆಯ ಸಂದರ್ಭ ಹೆದ್ದಾರಿ ಬಂದ್‌ ಮಾಡುವ ಪ್ರಸಂಗಬರುತ್ತದೆ. ಈ ಕುರಿತು ಸಂಘಟಕರು ಮೊದಲೇ ಎಚ್ಚೆತ್ತುಕೊಳ್ಳಬೇಕೆಂದು ನುಡಿದರು.

ಈ ವೇಳೆ ಸಭೆಯಲ್ಲಿದ್ದ ಇಡ್ಯಾ ಖಿಲ್ರಯಾ ಮಸೀದಿಯ ಪದಾಧಿಕಾರಿಗಳು, ಕಳೆದ ವಾರ್ಷಿಕ ಮೌಲೂದ್‌ ಸಂದರ್ಭದಲ್ಲಿ ಸುರತ್ಕಲ್‌ ಪೇಟೆಯಿಂದ ಇಡ್ಯಾ ಸಂಪರ್ಕಿಸುವ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು ಆದರೆ, ಈ ಬಾರಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ನುಡಿದರು.

ಬಳಿಕ ಸಭೆಯಲ್ಲಿದ್ದ ಮನಪಾ ಸದಸ್ಯ ಲೋಕೇಶ್‌ ಬೊಳ್ಳಾಜೆ ಮಾತನಾಡಿ, ಸಮಸ್ಯೆಗಳು ಘಟಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಕಾರ್ಯಕ್ರಮ ನಡೆಯುವ ಮುನ್ನವೇ ಸೂಕ್ತ ಕ್ರಮ ಕೈಗೊಂಡು ಕಾರ್ಯಕ್ರಮ ಆಯೋಜಿಸುವುದು ಉತ್ತಮ ಎಂದು ಸಭೆಗೆ ಕಿವಿಮಾತು ಹೇಳಿದರು.

ಸಭೆಯಲ್ಲಿ ಸುರತ್ಕಲ್‌ ಪೊಲೀಸ್‌ ಠಾಣೆಯ ಉಪ ಪೊಲೀಸ್‌ ನಿರೀಕ್ಷಕ ರಘುನಾಯಕ್‌ ಉಪಸ್ಥಿತರಿದ್ದರು. ಸಭೆಯಲ್ಲಿ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಸುರತ್ಕಲ್‌, ಕೃಷ್ಣಾಪುರ , ಕಾಟಿಪಳ್ಳ, ಮುಕ್ಕ, ಚೊಕ್ಕಬೆಟ್ಟು, ಕಾನ, ಕಳವಾರು ಸೇರಿದಂತೆ ವಿವಿಧ ಜುಮಾ ಮಸೀದಿಗಳ ಪದಾಧಿಕಾರಿಗಳು, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

"ಶೋಭಾಯಾತ್ರೆಗಳಲ್ಲಿ ವಿವಾಧಾತ್ಮಕ, ಯಾವುದೇ ಜಾತಿ-ಧರ್ಮಗಳ ಸಹೋದರರ ಮನಸ್ಸಿಗೆ ವೋವುಂಟುಮಾಡುವ ಟ್ಯಾಬ್ಲೊಗಳು, ಅಸಭ್ಯವಾಗಿರುವ ಟ್ಯಾಬ್ಲೊಗಳನ್ನು ಮಾಡುವಂತಿಲ್ಲ. ಸಂಸ್ಕೃತಿ, ಸೌಹಾರ್ದಕ್ಕೆ ಉತ್ತಮ ಸಂದೇಶ ನೀಡುವ ಟ್ಯಾಬ್ಲೊಗಳನ್ನು ಮಾಡಿ ಕಾನೂನು ಪಾಲನೆಯೊಂದಿಗೆ ಸೌಹಾರ್ದವಾಗಿ ಹಬ್ಬ ಆಚರಿಸಬೇಕು". -ಮಹೇಶ್ ಪ್ರಸಾದ್‌, ಪೊಲೀಸ್‌ ನಿರೀಕ್ಷರು ಸುರತ್ಕಲ್‌ ಪೊಲೀಸ್‌ ಠಾಣೆ

ದೂರು ಕೇಳಿಬಂದರೆ ಮುಲಾಜಿಲ್ಲದೆ ಕ್ರಮ: ಪೊಲೀಸ್‌ ನಿರೀಕ್ಷರ ಎಚ್ಚರಿಕೆ

ಯಾವುದೇ ಧರ್ಮದ ಸಮಾರಂಭಗಳಿಗೆ ಡಿಜೆಗೆ ಮಾನ್ಯತೆ ಇಲ್ಲ. ಡಿಜೆ ಬಳಕೆ ಅಥವಾ ಇನ್ಯಾವುದೇ ರೀತಿಯಲ್ಲಿ ಜನಸಾಮಾನ್ಯರಿಗೆ ತೊಂದರೆಗಳಾದ ಕುರಿತು ದೂರುಗಳು ಬಂದರೆ ಮುಲಾಜಿಲ್ಲದೆ ಕಾರ್ಯಕ್ರಮ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ. ಆ ಬಳಿಕ ಪೊಲೀಸ್‌ ಇಲಾಖೆಯನ್ನು ದೂರುವ ಕೆಲಸ ಮಾಡಬಾರದು ಎಂದು ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಎಲ್ಲಾ ಧರ್ಮಗಳ ಮುಖಂಡರು, ಸಮಿತಿಗಳ ಮುಖಂಡರಿಗೆ ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News