ಡಾ. ರೇಣುಕಾಪ್ರಸಾದ್ ನಡೆಸುತ್ತಿದ್ದ ಎಲ್ಲಾ ವಿದ್ಯಾಸಂಸ್ಥೆಗಳನ್ನು ಮುನ್ನಡೆಸಲು ಶಕ್ತರಾಗಿದ್ದೇವೆ: ಡಾ.ಜ್ಯೋತಿ ಆರ್.ಪ್ರಸಾದ್

Update: 2023-10-06 17:16 GMT

ಸುಳ್ಯ : ಡಾ.ರೇಣುಕಾ ಪ್ರಸಾದ್ ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ನಾವು ಮುಂದೆಯೂ ವ್ಯವಸ್ಥಿತ ವಾಗಿ ಮುನ್ನಡೆಸಿಕೊಂಡು ಹೋಗಲು ಶಕ್ತರಾಗಿದ್ದೇವೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ಸದಸ್ಯೆ ಡಾ.ಜ್ಯೋತಿ ಆರ್ ಪ್ರಸಾದ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಅನೇಕ ವರ್ಷಗಳಿಂದ ನಮ್ಮ ಎಲ್ಲಾ ವಿದ್ಯಾಸಂಸ್ಥೆಗಳನ್ನು ಯಾವುದೇ ಆಡಳಿತಾತ್ಮಕ ಚ್ಯುತಿ ಬಾರದಂತೆ ಅಚ್ಚು ಕಟ್ಟಾಗಿ ನಡೆಸುತ್ತಾ ಬಂದಿದ್ದೇವೆ. ಈಗ ಡಾ.ರೇಣುಕಾಪ್ರಸಾದ್ ಅವರಿಗೆ ಶಿಕ್ಷೆ ಆಗಿರುವ ಹಿನ್ನಲೆಯಲ್ಲಿ ಅತೀವ ನೋವಿನಲ್ಲಿದ್ದೇವೆ. ಈ ಸಂದರ್ಭದಲ್ಲಿ ಅಕಾಡೆಮಿಯ ಪದಾಧಿಕಾರಿಗಳು ನಮ್ಮ ಆಡಳಿತಾ ಧಿಕಾರದಲ್ಲಿ ಇರುವ ಪಾಲಿಟೆಕ್ನಿಕ್ ಕಾಲೇಜಿಗೆ ಬಂದು ಸಂಸ್ಥೆಯ ಲೆಕ್ಕಪತ್ರ ಮತ್ತು ದಾಖಲೆಗಳನ್ನು ಕೇಳಿದ್ದಾರೆ. ಇದರಿಂದ ಸಂಸ್ಥೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಗೊಂದಲಕ್ಕೆ ಈಡಾಗಿದ್ದಾರೆ ಎಂದು ಹೇಳಿದರು. ನಾವು ಕೂಡ ಅಕಾಡೆಮಿಯ ಆಡಳಿತಾತ್ಮಕ ಪಾಲುದಾರರಾಗಿದ್ದು ಡಾ.ರೇಣುಕಾಪ್ರಸಾದ್ ಅವರ ನೇತೃತ್ವದಲ್ಲಿ ಇದ್ದ ಎಲ್ಲಾ ಸಂಸ್ಥೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿದ್ದೇವೆ. ಈ ಸಂಸ್ಥೆಗಳನ್ನು ಇನ್ನು ಮುಂದೆಯೂ ವ್ಯವಸ್ಥಿತವಾಗಿ ಮುನ್ನಡೆಸುತ್ತೇವೆ ಎಂದ ಜ್ಯೋತಿ ಆರ್ ಪ್ರಸಾದ್ ರೇಣುಕಾಪ್ರಸಾದ್ ಅವರಿಗೆ ಹೈಕೋರ್ಟ್ ಶಿಕ್ಷೆ ವಿಧಿಸಿದರುವುದರ ವಿರುದ್ಧ ಸುಪ್ರೀಂಕೋರ್ಟ್‍ಗೆ ಮೇಲ್ನಮನವಿ ಸಲ್ಲಿಸುತ್ತೇವೆ. ಅಲ್ಲಿ ಅವರು ದೋಷ ಮುಕ್ತರಾಗಿ ಬರುವ ವಿಶ್ವಾಸ ಇದೆ ಎಂದು ಹೇಳಿದರು. ನಮ್ಮ ಎಲ್ಲಾ ಸಂಸ್ಥೆಗಳ ಪ್ರಿನ್ಸಿಪಾಲರನ್ನು ಕರೆದು ನೈತಿಕ ಬಲ ತುಂಬಿ ಮುಂದೆಯೂ ಈ ಸಂಸ್ಥೆಗಳು ವ್ಯವಸ್ಥಿತವಾಗಿ ಮುನ್ನಡೆಯಲಿದೆ ಎಂದು ಧೈರ್ಯ ತುಂಬಿದ್ದೇವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಅಭಿಜ್ಞಾ ಆರ್. ಪ್ರಸಾದ್ ಉಪಸ್ಥಿತರಿದ್ದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ಅಧೀನದಲ್ಲಿರುವ ಕೆವಿಜಿ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ಆಸ್ತಿ. ಇದರ ಹಿತದೃಷ್ಠಿಯಿಂದ ಸೂಕ್ತ, ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೆವಿಜಿ ಪಾಲಿಟಕ್ನಿಕ್ ಕಾಲೇಜಿಗೆ ಆಡಳಿತ ಮಂಡಳಿ ಸದಸ್ಯರು ಭೇಟಿ ನೀಡಿದ್ದಾರೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಕಾಡೆಮಿಯ ಸದಸ್ಯರಾದ ಡಾ.ರೇಣುಕಾ ಪ್ರಸಾದ್ ಕೆ. ವಿ. ಅವರಿಗೆ ಶಿಕ್ಷೆ ಆಗಿರುವ ಹಿನ್ನಲೆಯಲ್ಲಿ ಎಲ್ಲಾ ಸಂಸ್ಥೆಗಳು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ವ್ಯಾಪ್ತಿಗೆ ಬರುವುದರಿಂದ ಈ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ, ಉದ್ಯೋಗಿಗಳು ಹಾಗೂ ಸಂಸ್ಥೆಯ ಭವಿಷ್ಯದ ಹಿತದೃಷ್ಠಿಯಿಂದ ಯಾವುದೇ ತೊಂದರೆ ಗಳು ಬಾರದಂತೆ ಹಾಗೂ ಸಂಸ್ಥೆಯ ಅಭಿವೃದ್ಧಿಯ ದೃಷ್ಠಿಯಿಂದ ಕ್ರಮಗಳನ್ನು ಕೈಗೊಳ್ಳಲು ಎಒಎಲ್‍ಇ ಸಭೆಯಲ್ಲಿ ನಿರ್ಧರಿಸಲಾಗಿದೆ. ಆ ಪ್ರಯುಕ್ತ ಪ್ರಥಮ ಹಂತದಲ್ಲಿ ಕೌನ್ಸಿಲ್ ಸದಸ್ಯರು ಕೆ.ವಿ.ಜಿ ಪಾಲಿಟೆಕ್ನಿಕ್‍ಗೆ ಶುಕ್ರವಾರ ಭೇಟಿ ನೀಡಿ ಕಾಲೇಜಿನ ಪ್ರಿನ್ಸಿಪಾಲರ ಜೊತೆಗೆ ಸಂಸ್ಥೆಯ ಪ್ರಗತಿಯ ಬಗ್ಗೆ ಚರ್ಚಿಸಿದ್ದೇವೆ. ಹಾಗೂ ಈ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ಉತ್ತಮವಾಗಿ ನಡೆಸಿಕೊಂಡು ಬರಲು ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಹಾಗೂ ಇತ್ತೀಚೆಗೆ ನಡೆದ ವಿದ್ಯಾಮಾನಗಳ ಬಗ್ಗೆ ಚರ್ಚಿಸಲಾಯಿತು. ಈ ಸಭೆ ಯಲ್ಲಿ ಕೇವಲ ಸಂಸ್ಥೆಯ ಹಿತದೃಷ್ಟಿಯನ್ನು ಕಾಪಾಡುವ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ನಿರ್ದೇಶಕರಾದ ಐಶ್ವರ್ಯ, ಕೆ.ವಿ.ಹೇಮನಾಥ್ ಉಪಸ್ಥಿತರಿದ್ದರು.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News