ಪಿಲಿಕುಳ ಕಂಬಳದಲ್ಲಿ ಬಿಜೆಪಿ ಜಾತಿ ರಾಜಕಾರಣ ಏಕೆ? : ಪ್ರತಿಭಾ ಕುಳಾಯಿ
ಮಂಗಳೂರು, ಸೆ.13:ಪಿಲಿಕುಳ ಕಂಬಳದ ಪೂರ್ವಭಾವಿ ಸಭೆಗೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಕರೆಯದೆ ಜಿಲ್ಲಾಡಳಿತ ಅವಮಾನ ಮಾಡಿದೆ ಎಂದು ಮೂಡ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು ಸುಳ್ಳು ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ, ಇದು ಬಿಲ್ಲವ ಸಮಾಜಕ್ಕೆ ಅವಮಾನ ಎಂದೂ ಜಾತಿ ರಾಜಕಾರಣವನ್ನು ಎತ್ತಿ ಕಟ್ಟಿದ್ದಾರೆ. ಕಂಬಳದಲ್ಲೂ ಜಾತಿ ರಾಜಕಾರಣ ಮಾಡುವ ಅಗತ್ಯ ಇದೆಯೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರೆ ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಲಿಕುಳ ಕಂಬಳಕ್ಕೂ, ಬಿಲ್ಲವ ಸಮುದಾಯಕ್ಕೂ ಏನು ಸಂಬಂಧ? ಇದರಲ್ಲಿ ಜಾತಿ ವಿಷಯವನ್ನು ಎತ್ತಿ ಕಟ್ಟೋದು ಎಷ್ಟು ಸಮಂಜಸ ಎಂದರು.
ಜಿಲ್ಲಾಡಳಿತವು ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಆಹ್ವಾನಿಸಿಲ್ಲ ಎನ್ನುವುದು ಸುಳ್ಳು. ಜಿಲ್ಲಾಧಿಕಾರಿ ಅವರು ಶಾಸಕರಿಗೆ ಮೊಬೈಲ್ ಕರೆ ಮಾಡಿದ್ದರು, ಆದರೆ ಅವರು ಕರೆ ಸ್ವೀಕರಿಸಿಲ್ಲ. ನಂತರ ಎಸ್ಎಂಎಸ್ ಮೂಲಕ ಆಹ್ವಾನ ನೀಡಿದ್ದಾರೆ. ಅಲ್ಲದೆ ಕಂಬಳ ಸಮಿತಿಯವರು ಕೂಡ ಉಮಾನಾಥ ಕೋಟ್ಯಾ ನ್ ಅವರಿಗೆ ಆಹ್ವಾನ ನೀಡಿದ್ದರು ಎಂದು ಪ್ರತಿಭಾ ಕುಳಾಯಿ ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಲಿಕುಳ ಅಭಿವೃದ್ಧಿಗಾಗಿ ಅಥವಾ ಅಲ್ಲಿನ ಪುನಶ್ಚೇತನಕ್ಕೆ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಪಿಲಿಕುಳ ಪ್ರವಾಸೋದ್ಯಮವನ್ನು ಮತ್ತೆ ಪುನರುತ್ಥಾನ ಮಾಡಲು ಈಗ ಸರ್ಕಾರದ ವತಿಯಿಂದ ಮತ್ತೆ ಕಂಬಳ ಆಯೋಜಿಸಲಾಗುತ್ತಿದೆ. ಇದಕ್ಕೆ ಸಹಕಾರ ನೀಡುವುದನ್ನು ಬಿಟ್ಟು ಅನಗತ್ಯವಾಗಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಅವರು ಬಿಲ್ಲವ ಸಮುದಾಯದ ಬಗ್ಗೆ, ಕೋಟಿ ಚೆನ್ನಯರ ಬಗ್ಗೆ, ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವಾಗ ಈಗ ಆರೋಪ ಮಾಡುವವರು ಎಲ್ಲಿದ್ದರು? ಅವರನ್ನು ಕನಿಷ್ಠ ಪಕ್ಷದ ಹುದ್ದೆಯಿಂದಲೂ ತೆಗೆಯುವ ಕೆಲಸ ಮಾಡಿಲ್ಲ. ಆಗ ಬಿಲ್ಲವರ ಕಾಳಜಿ ಇರಲಿಲ್ಲವೆ ಎಂದು ಪ್ರಶ್ನಿಸಿದರು.
ಉಮಾನಾಥ ಕೋಟ್ಯಾನ್ ತಮ್ಮ ಅಧಿಕಾರವಧಿಯಲ್ಲಿ ಪಿಲಿಕುಳಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎನ್ನುವುದನ್ನು ತಿಳಿಸಲಿ. ಜಿಲ್ಲಾಧಿಕಾರಿಯಾದವರು ಪ್ರತಿಯೊಂದು ಕಾರ್ಯಕ್ರಮಗಳಿಗೆ ಶಾಸಕರ ಮನೆಗೆ ಹೋಗಿ ಆಹ್ವಾನ ನೀಡಬೇಕಿಲ್ಲ, ಕರೆ ಮಾಡಿ ತಿಳಿಸುವುದು ವಾಡಿಕೆ. ಮನೆಗೇ ಹೋಗಿ ಆಹ್ವಾನ ನೀಡಬೇಕು ಎನ್ನುವ ಶಾಸಕರ ಮನಸ್ಥಿತಿ ಏನು ಎಂದವರು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡರಾದ ನೀರಜ್‌ಪಾಲ್, ಚಂದ್ರಹಾಸ ರೈ, ಮೋಹನ್ ಕೋಟ್ಯಾನ್ ಇದ್ದರು.