ವಿಶ್ವದರ್ಜೆಯ ತಂತ್ರಜ್ಞಾನ ಅಭಿವೃದ್ಧಿಗೆ ಯುವ ಇಂಜಿನಿಯರ್ ಗಳು ಮುಂದಾಗಬೇಕು: ಡಾ. ಸತೀಶ್ ರೆಡ್ಡಿ ಕರೆ

Update: 2023-11-04 11:50 GMT

ಮಂಗಳೂರು, ನ.4: ಭಾರತ ಸಾಧಿಸಿರುವ ತಂತ್ರಜ್ಞಾನದ ಪರಿಣಾಮವಾಗಿ ಜಾಗತಿಕವಾಗಿ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಲ್ಪಟ್ಟಿದೆ. ಎನ್ಐಟಿಕೆ ಯಂತಹ ಸಂಸ್ಥೆಗಳು ವಿಶ್ವದಲ್ಲೇ ಅಗ್ರಸ್ಥಾನದ ವಿನೂತನ ಆವಿಷ್ಕಾರಗಳನ್ನು ಮಾಡುವ ಕೇಂದ್ರ ಗಳಾಗಬೇಕು ಎಂದು ಭಾರತದ ವೈಮಾನಿಕ ಸೊಸೈಟಿಯ ಅಧ್ಯಕ್ಷ, ಭಾರತ ಸರಕಾರದ ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರ ಮತ್ತು ಮಾಜಿ ಡಿಆರ್ ಡಿಒ ಮಾಜಿ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಹೇಳಿದ್ದಾರೆ.

ಸುರತ್ಕಲ್ ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್.ಐ.ಟಿ.ಕೆ.) ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂ ಡಿದ್ದ ಎನ್.ಐ.ಟಿ.ಕೆ 21ನೇ ವಾರ್ಷಿಕ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಭಾರತ ಕಳೆದ ಕೆಲವು ದಶಕಗಳಿಂದ ಬಾಹ್ಯಾಕಾಶ, ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಗುರುತಿಸಲ್ಪಡುವ ಗಮನಾರ್ಹ ಸಾಧನೆ ಮಾಡಿದೆ. ಉಪಗ್ರಹಗಳ ಉಡಾವಣೆಯಿಂದ ಆರಂಭಿಸಿ ಇತ್ತೀಚೆಗೆ ಅತ್ಯಾಧುನಿಕ ವಿಶ್ವ ದರ್ಜೆಯ ಅಗ್ನಿ, ಪೃಥ್ವಿಯಂತಹ ಖಂಡಾಂತರ ಕ್ಷಿಪಣಿಗಳು, ವಿಕ್ರಾಂತ್ ನಂತಹ ವಿಮಾನ ವಾಹಕ ನೌಕೆಗಳು, ಅತ್ಯಾಧುನಿಕ ಸಬ್ ಮೆರಿನ್ ಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.

ದೇಶದಲ್ಲಿ 2016ರಲ್ಲಿ 415 ಸ್ಟಾರ್ಟ್ ಅಪ್ ಕಂಪೆನಿ ಗಳಿದ್ದವು. ಪ್ರಸಕ್ತ ಒಂದು ಲಕ್ಷ ಸ್ಟಾರ್ಟ್ ಅಪ್ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಹಿಂದೆ ದೇಶದಲ್ಲಿ ಬೆರಳೆಣಿಕೆಯಷ್ಟು ಐಐಟಿಗಳಿದ್ದವು. ಆದರೆ ಇತ್ತೀಚೆಗೆ ಪ್ರತಿ ರಾಜ್ಯದಲ್ಲೂ ಎನ್ ಐಟಿ, ಐಐಟಿ ಆರಂಭಗೊಂಡಿದೆ. ಭಾರತ ಜಾಗತಿಕವಾಗಿ ಸ್ಪರ್ಧೆಯನ್ನು ಎದುರಿಸುವ ಮನೋಭಾವವನ್ನು ಹೊಂದಿರುವ ಯುವ ತಂತ್ರಜ್ಞರನ್ನು ಹೊಂದಿದೆ ಎಂದು ಸತೀಶ್ ರೆಡ್ಡಿ ಅಭಿಪ್ರಾಯಿಸಿದ್ದಾರೆ.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ಸಿ.ಎಸ್.ಐ.ಆರ್., ಎನ್.ಐ.ಐ.ಎಸ್.ಎಸ್. ಅಧ್ಯಕ್ಷ ಡಾ.ಆನಂದ ಕೃಷ್ಣನ್ ಮಾತನಾಡಿ, ದೇಶದಲ್ಲಿ ಶೇ.54 ನಗರಗಳು ನೀರಿನ ಕೊರತೆ ಎದುರಿಸುತ್ತಿದೆ. ಜಾಗತಿಕವಾಗಿ ಹವಾಮಾನ ವೈಪರೀತ್ಯದ ಸಮಸ್ಯೆ ಎದುರಿಸುತ್ತಿದೆ. ದೇಶದಲ್ಲಿ 1960ರಲ್ಲಿ ಎದುರಿಸುತ್ತಿರುವ ಆಹಾರ ಸಮಸ್ಯೆಯಲ್ಲಿ ಸುಧಾರಣೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಆಹಾರದ ಉತ್ಪಾದನೆಯಾಗುತ್ತಿದೆ. ಆದರೆ ಭವಿಷ್ಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆಹಾರದ ಸವಾಲು ಎದುರಾಗಬಹುದು ಎಂದರು.

ಹೆಚ್ಚುತ್ತಿರುವ ಡಯಾಬಿಟಿಸ್, ಹೃದ್ರೋಗ, ಅನಿಮಿಯ ಮೊದಲಾದ ಆರೋಗ್ಯ ಸಮಸ್ಯೆಗಳು ನಮ್ಮ ಮುಂದಿವೆ. ಭವಿಷ್ಯದಲ್ಲಿ ಇಂಧನ ಸಮಸ್ಯೆ ಎದುರಿಸಲು ಜೈವಿಕ ಇಂಧನ, ಎಥೆನಾಲ್ ಅನ್ನು ತ್ಯಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸ ಬೇಕಾಗಿದೆ ಎಂದು ಆನಂದ ಕೃಷ್ಣ ನ್ ತಿಳಿಸಿದ್ದಾರೆ.

ಸಮಾರಂಭದಲ್ಲಿ 134 ಪಿ.ಎಚ್.ಡಿ., 961 ಸ್ನಾತಕೋತ್ತರ, 914 ಪದವೀಧರರು ಸೇರಿದಂತೆ ಒಟ್ಟು 2000 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಎನ್.ಐ.ಟಿ.ಕೆ. ನಿರ್ದೇಶಕ ಪ್ರೊ.ಬಿ.ವಿ.ರವಿ ಸ್ವಾಗತಿಸಿದರು.










 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News