ಛತ್ತೀಸ್‌ಗಢದಲ್ಲಿ ಹೆಚ್ಚಿದ ಮಾನವ-ವನ್ಯಜೀವಿ ಸಂಘರ್ಷ| 11 ವರ್ಷಗಳಲ್ಲಿ 595 ಜೀವಗಳು ಬಲಿ
ರಾಯ್ಪುರ: ಛತ್ತೀಸ್‌ಗಢದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ 11 ವರ್ಷಗಳಲ್ಲಿ 595 ಜನರು ತಮ್ಮ ಜೀವಗಳನ್ನು ಕಳೆದುಕೊಂಡಿದ್ದು, ಪರಿಣಾಮಕಾರಿ ರಕ್ಷಣಾ ಕ್ರಮಗಳ ತುರ್ತು ಅಗತ್ಯವನ್ನು ಒತ್ತಿ ಹೇಳುತ್ತಿದೆ.
ಮಾನವ-ವನ್ಯಜೀವಿ ಸಂಘರ್ಷಗಳ ಇತ್ತೀಚಿನ ನಿದರ್ಶನವು ಸರ್ಗುಜಾ ಜಿಲ್ಲೆಯಲ್ಲಿ ನಡೆದಿದೆ. ಗುಡಿಸಲೊಂದಕ್ಕೆ ದಾಳಿ ಮಾಡಿದ ಆನೆಗಳ ಹಿಂಡು ಪಾಂಡೋ ಬುಡಕಟ್ಟಿನ ಇಬ್ಬರು ಪುಟ್ಟ ಮಕ್ಕಳನ್ನು ತುಳಿದು ಕೊಂದು ಹಾಕಿತ್ತು. ದಿಶು(11) ಮತ್ತು ಕಾಜಲ್ (5) ಆನೆ ದಾಳಿಗೆ ಬಲಿಯಾಗಿದ್ದರು.
ಸುರ್ಗುಜಾ, ರಾಯ್‌ಗಢ, ಕೊರ್ಬಾ, ಸೂರಜ್‌ಪುರ, ಮಹಾಸಮುಂಡ್, ಧಮ್ತಾರಿ, ಗರಿಯಾಬಂಧ್ ಮತ್ತು ಬಲೋದ್ ಜಿಲ್ಲೆಗಳು ಮಾನವ-ವನ್ಯಜೀವ ಸಂಘರ್ಷ ಹೆಚ್ಚಳವಾಗಿದೆ. ಈ ಪ್ರದೇಶದಲ್ಲಿ 2021-22ರಲ್ಲಿ 95 ಸಾವುಗಳು ಮತ್ತು ಕಳೆದ ಎರಡು ವರ್ಷಗಳಲ್ಲಿ ತಲಾ 77 ಸಾವುಗಳೊಂದಿಗೆ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ವನ್ಯಜೀವಿ ಇಲಾಖೆಯ ಮಾಹಿತಿಯು ಬಹಿರಂಗಪಡಿಸಿದೆ. 2024ರ ಜನವರಿಯಿಂದ ಇಲ್ಲಿಯವರೆಗೆ ಮಾನವ-ವನ್ಯಜೀವಿ ಸಂಘರ್ಷಗಳು ಸುಮಾರು 10 ಜೀವಗಳನ್ನು ಬಲಿ ಪಡೆದಿವೆ.
ಈ ಬೆಳವಣಿಗೆ ಮಧ್ಯೆ ವನ್ಯಜೀವಿ ತಜ್ಞರು ಮತ್ತು ಸಂರಕ್ಷಣಾಕಾರರು ಮಾನವ-ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸುಧಾರಿತ ವಿಧಾನಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.