ಮೋದಿ 3.0 ಸರಕಾರಕ್ಕೆ ನೂರು ದಿನ | ಪ್ರಧಾನಿ ಮೋದಿಯದ್ದು ʼಯು ಟರ್ನ್ʼ ಸರಕಾರ ; ಕಾಂಗ್ರೆಸ್ ವ್ಯಂಗ್ಯ

Update: 2024-09-16 15:13 GMT

ಸುಪ್ರಿಯಾ ಶ್ರೀನೇತ್ |  PTI 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೆಯ ಅವಧಿಯ ಸರಕಾರ 100 ದಿನ ಪೂರೈಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಊರುಗೋಲಿನ ಆಶ್ರಯದಲ್ಲಿ ದುರ್ಬಲ ಪ್ರಧಾನಿಯಾಗಿದ್ದು, ಯು ಟರ್ನ್ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಹೊಸ ದಾಖಲೆ ನಿರ್ಮಿಸಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕಳೆದ ನೂರು ದಿನಗಳ ಆಡಳಿತವು ದೇಶದ ರೈತರು, ಯುವಕರು, ಮಹಿಳೆಯರು, ಮೂಲಸೌಕರ್ಯ, ರೈಲ್ವೆ ಹಾಗೂ ಒಟ್ಟಾರೆ ಶಾಂತಿಯ ಪಾಲಿಗೆ ಭಾರವಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ವಾಗ್ದಾಳಿ ನಡೆಸಿದ್ದಾರೆ.

ಸಮಸ್ಯೆಗಳಿಗೆ ಕುರುಡಾಗುವುದು ಹಾಗೂ ಸವಾಲುಗಳನ್ನೆದುರಿಸಲಾಗದೆ ಓಡಿ ಹೋಗುವ ಮೋದಿಯ ಅಭ್ಯಾಸವು ಮುಂದುವರಿದಿದೆ ಎಂದೂ ಅವರು ಲೇವಡಿ ಮಾಡಿದ್ದಾರೆ.

“ಈ ಸರಕಾರದ 100 ದಿನಗಳ ಆಡಳಿತದ ಪ್ರತಿ ಕ್ಷಣವೂ ಅಸ್ಥಿರತೆ, ನಿರ್ಧಾರ ಕೈಗೊಳ್ಳಲಾಗದ ಸ್ಥಿತಿ ಹಾಗೂ ಅಪ್ರಬುದ್ಧತೆಯಿಂದ ಕೂಡಿದೆ” ಎಂದೂ ಅವರು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿರುವ ಸುಪ್ರಿಯಾ ಶ್ರೀನೇತ್, “ನಿಮಗೇನಾದರೂ ನೆರೆಹೊರೆ ದೇಶಗಳೊಂದಿಗೆ ಸಂಬಂಧವನ್ನು ಸುಧಾರಿಸುವ ಯೋಜನೆ ಇದೆಯೆ? ನಿಮಗೇನಾದರೂ ಆರ್ಥಿಕತೆ, ಆದಾಯ ಅಸಮಾನತೆ, ನಿರುದ್ಯೋಗ, ಹಣದುಬ್ಬರ ಅಥವಾ ಮಹಿಳಾ ಸುರಕ್ಷತೆ ಸಮಸ್ಯೆಗಳನ್ನು ಪರಿಹರಿಸುವ ಯೋಜನೆ ಇದೆಯೆ?” ಎಂದು ಹರಿಹಾಯ್ದಿದ್ದಾರೆ.

ಮೋದಿ ಸರಕಾರದ ಮೂರನೆ ಅವಧಿಯ 100 ದಿನಗಳ ಆಡಳಿತದಲ್ಲಿ 38 ರೈಲು ಅಪಘಾತಗಳಾಗಿದ್ದು, 21 ಮಂದಿ ಮೃತಪಟ್ಟಿದ್ದಾರೆ. 112ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 100 ದಿನಗಳ ಅವಧಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ವಿಮಾನ ನಿಲ್ದಾಣ, ಸೇತುವೆಗಳು, ರಸ್ತೆಗಳು ಹಾಗೂ ಪ್ರತಿಮೆಗಳು ಸೇರಿದಂತೆ 58 ಪ್ರಮುಖ ಮೂಲಸೌಕರ್ಯ ಯೋಜನೆಗಳು ಕುಸಿದು ಬಿದ್ದಿವೆ. 26 ಭಯೋತ್ಪಾದಕ ದಾಳಿಗಳು ನಡೆದಿದ್ದು, ಈ ದಾಳಿಯಲ್ಲಿ 21 ಮಂದಿ ಯೋಧರು ಹುತಾತ್ಮರಾಗಿದ್ದಾರೆ. 29 ಮಂದಿ ಯೋಧರು ಹಾಗೂ 15 ನಾಗರಿಕರು ಗಾಯಗೊಂಡಿದ್ದಾರೆ” ಎಂದು ಅವರು ಮೋದಿ ಸರಕಾರದ ಮೂರನೆ ಅವಧಿಯ ನೂರು ದಿನಗಳಲ್ಲಿನ ಆಡಳಿತ ವೈಫಲ್ಯದ ಪಟ್ಟಿಯನ್ನು ಮುಂದಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News