ಬಿಜೆಪಿ ಬಡರಾಜ್ಯಗಳ ಬೆನ್ನೆಲುಬುಗಳನ್ನು ಮುರಿದಿದೆ, ಜಾರ್ಖಂಡ್‌ನ್ನು ನಿಂಬೆಹಣ್ಣಿನಂತೆ ಹಿಂಡಿದೆ: ಹೇಮಂತ್ ಸೊರೇನ್
ರಾಂಚಿ: ಬಿಜೆಪಿ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ಕೇಸರಿ ಪಕ್ಷವು ಸುಮಾರು ಎರಡು ದಶಕಗಳಿಂದಲೂ ರಾಜ್ಯವನ್ನು ನಿಂಬೆಹಣ್ಣಿನಂತೆ ಹಿಂಡುತ್ತಿದೆ ಮತ್ತು ಬಡರಾಜ್ಯಗಳ ಬೆನ್ನೆಲುಬುಗಳನ್ನು ಮುರಿಯುತ್ತಿದೆ ಎಂದು ಆಪಾದಿಸಿದ್ದಾರೆ.
ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಬಿಜೆಪಿ ನೇತೃತ್ವದ ಕೇಂದ್ರವು ಶಾಸಕರು ಮತ್ತು ಸಂಸದರ ಖರೀದಿ ಹಾಗೂ ಸರಕಾರಗಳನ್ನು ಉರುಳಿಸುವ ಮೂಲಕ ‘ಡಬಲ್ ಇಂಜಿನ್ ಸರಕಾರಗಳನ್ನು’ ಸೃಷ್ಟಿಸುತ್ತಿದೆ ಮತ್ತು ತನ್ಮೂಲಕ ದೇಶದ ಒಕ್ಕೂಟ ರಚನೆಯನ್ನು ನಾಶಗೊಳಿಸುತ್ತಿದೆ ಎಂದೂ ಆರೋಪಿಸಿರುವ ಸೊರೇನ್, ‘ಬಿಜೆಪಿ ಕಳೆದರಡು ದಶಕಗಳಿಂದಲೂ ಜಾರ್ಖಂಡ್‌ನ್ನು ನಿಂಬೆಹಣ್ಣಿನಂತೆ ಹಿಂಡುತ್ತಿದೆ, ಆದರೆ ಈಗ ಇದು ಕೊನೆಗೊಳ್ಳಬೇಕಿದೆ. ಅವರು ಜಾರ್ಖಂಡ್‌ನ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಾರೆ. ಖನಿಜ ಸಂಪನ್ಮೂಲಗಳಲ್ಲಿ ಶ್ರೀಮಂತವಾಗಿರುವ ಜಾರ್ಖಂಡ್ ಅತ್ಯಂತ ಬಡ ರಾಜ್ಯಗಳಲ್ಲಿ ಒಂದಾಗಿರುವುದು ವಿರೋಧಾಭಾಸವಾಗಿದೆ’ ಎಂದು ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಕಲ್ಲಿದ್ದಲು,ಕಬ್ಬಿಣದ ಅದಿರು,ಬಾಕ್ಸೈಟ್ ಮತ್ತು ಡೋಲೊಮೈಟ್ ನಿಕ್ಷೇಪಗಳು ಹೇರಳವಾಗಿವೆ, ಆದರೆ ಕೇಂದ್ರದ ಜಿಎಸ್‌ಟಿ ನೀತಿಯಿಂದಾಗಿ ರಾಜ್ಯದ ಆದಾಯ ಸಂಗ್ರಹಕ್ಕೆ ಹೊಡೆತ ಬಿದ್ದಿದೆ. ರಾಜ್ಯದ ಆರ್ಥಿಕ ಅಗತ್ಯಗಳಿಗೆ ಕೇಂದ್ರ ಎಂದೂ ನೆರವಾಗಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಪದೇ ಪದೇ ಪತ್ರಗಳನ್ನು ಬರೆದಿದ್ದರೂ ರಾಜ್ಯದ 1.36 ಲಕ್ಷ ಕೋಟಿ ರೂ.ಗಳ ಕಲ್ಲಿದ್ದಲು ಬಾಕಿಯನ್ನು ಇನ್ನೂ ಪಾವತಿಸಲಾಗಿಲ್ಲ ಎಂದು ಹೇಳಿರುವ ಸೊರೇನ್, ಬಿಜೆಪಿಯು ಅಧಿಕಾರವನ್ನು ಕಬಳಿಸಲು ವಿಭಜಕ ರಾಜಕೀಯ, ಹಿಂದೂ-ಮುಸ್ಲಿಮ್ ಧ್ರುವೀಕರಣ ಮತ್ತು ಕೋಮುದ್ವೇಷದ ಅಜೆಂಡಾ ಅನುಸರಿಸುತ್ತಿದೆ, ಆರೋಗ್ಯಕರ ರಾಜಕೀಯ ಸ್ಪರ್ಧೆಯನ್ನು ಅಳಿಸಿ ಹಾಕುತ್ತಿರುವುದು ದೇಶದ ದುರದೃಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನ.13 ಮತ್ತು 20ರಂದು ಚುನಾವಣೆ ನಡೆಯಲಿದ್ದು,ನ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.