ಮಹಾರಾಷ್ಟ್ರ ಚುನಾವಣೆ | ಲಾಡಕಿ ಬಹೀಣ ಯೋಜನೆ ಫಲಾನುಭವಿಗಳಿಗೆ ಬೆದರಿಕೆ ; ಕ್ಷಮೆ ಯಾಚಿಸಿದ ಬಿಜೆಪಿ ಸಂಸದ
ಮುಂಬೈ : ಮಹಾರಾಷ್ಟ್ರ ಸರಕಾರದ ‘ಲಾಡಕಿ ಬಹೀಣ(ಪ್ರೀತಿಯ ಸೋದರಿ)’ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಬೆದರಿಕೆಯೊಡ್ಡಿದ್ದಕ್ಕಾಗಿ ಬಿಜೆಪಿಯ ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ್ ಅವರು ಕ್ಷಮೆ ಯಾಚಿಸಿದ್ದಾರೆ.
ಲಾಡಕಿ ಬಹೀಣ ಯೋಜನೆಯಡಿ ವಾರ್ಷಿಕ ಕುಟುಂಬ ಆದಾಯ 2.5 ಲಕ್ಷ ರೂ.ಮೀರದ 21ರಿಂದ 65 ವರ್ಷ ವಯೋಮಾನದ ಮಹಿಳೆಯರು ಪ್ರತಿ ತಿಂಗಳು ನೇರ ನಗದು ವರ್ಗಾವಣೆಯ ಮೂಲಕ 1,500 ರೂ.ಗಳನ್ನು ಪಡೆಯುತ್ತಿದ್ದಾರೆ.
ಶನಿವಾರ ಕೊಲ್ಲಾಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮಹಾಡಿಕ್, ‘ನೀವು ಕಾಂಗ್ರೆಸ್ ರ‍್ಯಾಲಿಗಳಲ್ಲಿ ಲಾಡಕಿ ಬಹೀಣ ಯೋಜನೆಯ ಫಲಾನುಭವಿಗಳನ್ನು ಗುರುತಿಸಿದರೆ ಅವರ ಚಿತ್ರಗಳನ್ನು ತೆಗೆದುಕೊಳ್ಳಿ. ನಾವು ಅವರನ್ನು ನೋಡಿಕೊಳ್ಳುತ್ತೇವೆ. ನಮ್ಮ ಸರಕಾರದಿಂದ ಹಣ ಪಡೆದುಕೊಂಡು ಅವರ (ಕಾಂಗ್ರೆಸ್) ಸ್ತುತಿಗೀತೆ ಹಾಡಲು ಅವಕಾಶ ನೀಡಲಾಗುವುದಿಲ್ಲ ’ ಎಂದು ಹೇಳಿದ್ದರು.
ಕೊಲ್ಲಾಪುರ ದಕ್ಷಿಣ ಚುನಾವಣಾಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ಉಲ್ಲೇಖಿಸಿ ಮಹಾಡಿಕ್ ರಿಗೆ ನೋಟಿಸ್ ಜಾರಿಗೊಳಿಸಿ ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟನೆಯನ್ನು ನೀಡುವಂತೆ ಸೂಚಿಸಿದ್ದರು.
ಸೋಮವಾರ ರಾಜ್ಯ ಚುನಾವಣಾ ಆಯೋಗವು ಮಹಾಡಿಕ್ ವಿರುದ್ಧ ದೂರು ದಾಖಲಿಸಿತ್ತು. ಮಹಾಡಿಕ್ ಹೇಳಿಕೆಯನ್ನು ಪ್ರತಿಪಕ್ಷ ಮಹಾ ವಿಕಾಸ ಅಘಾಡಿ (ಎಂವಿಎ) ತೀವ್ರವಾಗಿ ಖಂಡಿಸಿತ್ತು.
ತನ್ನ ಹೇಳಿಕೆಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆ ಯಾಚಿಸಿರುವ ಮಹಾಡಿಕ್,‘ನನ್ನ ಹೇಳಿಕೆಯು ಯಾವುದೇ ತಾಯಿ ಅಥವಾ ಸೋದರಿಯನ್ನು ಅವಮಾನಿಸಲು ಉದ್ದೇಶಿಸಿರಲಿಲ್ಲ. ಆಡಳಿತ ಮಹಾಯುತಿ ಸರಕಾರದಿಂದ ಮಾತ್ರ ಕಲ್ಯಾಣ ಯೋಜನೆ ಯಶಸ್ವಿಯಾಗಿದೆ ಎನ್ನುವುದನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಅದು ಎಂವಿಎ ಹರಡುತ್ತಿರುವ ಸುಳ್ಳು ಪ್ರಚಾರಕ್ಕೆ ನನ್ನ ಸಹಜ ಪ್ರತಿಕ್ರಿಯೆಯಾಗಿತ್ತು ’ಎಂದು ಹೇಳಿದ್ದಾರೆ.