ಅಭಿವೃದ್ಧಿ ವಿರೋಧಿ ಚಟುವಟಿಕೆ, ಬಲವಂತದ ಮತಾಂತರ ನಡೆಸುವ NGO ಗಳ ವಿದೇಶಿ ದೇಣಿಗೆ ಪರವಾನಿಗೆ ರದ್ದು :ಕೇಂದ್ರ

Update: 2024-11-12 16:15 GMT

ಕೇಂದ್ರ ಗೃಹ ಸಚಿವಾಲಯ | PTI 

ಹೊಸದಿಲ್ಲಿ : ಅಭಿವೃದ್ಧಿ ವಿರೋಧಿ ಚಟುವಟಿಕೆಗಳು ಮತ್ತು ಬಲವಂತದ ಮತಾಂತರ ಧಾರ್ಮಿಕ ಮತಾಂತರಗಳಲ್ಲಿ ತೊಡಗಿರುವ ಎನ್‌ಜಿಒಗಳ ವಿದೇಶಿ ದೇಣಿಗೆ ಪರವಾನಿಗೆಗಳನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರ ಸರಕಾರವು ಹೇಳಿದೆ.

ದುರುದ್ದೇಶದಿಂದ ಪ್ರತಿಭಟನೆಗಳನ್ನು ಪ್ರಚೋದಿಸುವುದು, ಭಯೋತ್ಪಾದಕ/ದೇಶವಿರೋಧಿ ಸಂಘಟನೆಗಳೊಂದಿಗೆ ಸಂಪರ್ಕದಂತಹ ಚಟುವಟಿಕೆಗಳೂ ವಿದೇಶಿ ದೇಣಿಗೆ ಪರವಾನಿಗೆಯನ್ನು ರದ್ದುಗೊಳಿಸಲು ಸಂಭವನೀಯ ಕಾರಣಗಳಾಗಿವೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ)ಯಡಿ ತಮ್ಮ ಪರವಾನಿಗೆಗಳನ್ನು ರದ್ದುಗೊಳಿಸಿರುವುದಕ್ಕೆ ಅಥವಾ ನವೀಕರಿಸದ್ದಕ್ಕೆ ಸ್ಪಷ್ಟ ಕಾರಣಗಳನ್ನು ತಮಗೆ ನೀಡಲಾಗಿಲ್ಲ ಎಂದು ಕೆಲವು ಎನ್‌ಜಿಒಗಳ ದೂರುಗಳನ್ನು ತಾನು ಸ್ವೀಕರಿಸಿದ್ದೇನೆ ಎಂದು ನ.8ರ ನೋಟಿಸ್‌ನಲ್ಲಿ ತಿಳಿಸಿರುವ ಕೇಂದ್ರ ಗೃಹ ಸಚಿವಾಲಯವು,ಇಂತಹ ಕ್ರಮಗಳ ಹಿಂದಿನ ಕಾರಣಗಳನ್ನು ಪಟ್ಟಿ ಮಾಡಿದೆ.

ಎನ್‌ಜಿಒಗಳು ವಿದೇಶಿ ನಿಧಿಯನ್ನು ಸ್ವೀಕರಿಸಲು ಎಫ್‌ಸಿಆರ್‌ಎ ಅಡಿ ಪರವಾನಿಗೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ಸಂಸ್ಥೆ ಅಥವಾ ಅದರ ಯಾವುದೇ ಪದಾಧಿಕಾರಿಗಳು ‘ಮೂಲಭೂತವಾದಿ ಸಂಘಟನೆಗಳೊಂದಿಗೆ’ ಸಂಪರ್ಕವನ್ನು ಹೊಂದಿರುವುದು ಕಂಡು ಬಂದರೆ ಕಾಯ್ದೆಯಡಿ ಪರವಾನಿಗೆಗಳನ್ನು ರದ್ದುಗೊಳಿಸಬಹುದು ಎಂದು ಗೃಹಸಚಿವಾಲಯವು ತಿಳಿಸಿದೆ.

ಇತರ ಸಂಭವನೀಯ ಕಾರಣಗಳಲ್ಲಿ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ಬಾಕಿಯುಳಿದಿರುವ ಕ್ರಿಮಿನಲ್ ಪ್ರಕರಣಗಳು ಅಥವಾ ದೋಷನಿರ್ಣಯಗಳು, ಪ್ರಮುಖ ಮಾಹಿತಿಗಳ ಮರೆಮಾಚುವಿಕೆ ಅಥವಾ ತಪ್ಪು ನೋಂದಾಯಿತ ವಿಳಾಸ ಸೇರಿವೆ.

ಸಂಸ್ಥೆಯು ಕಳೆದ 2-3 ವರ್ಷಗಳಲ್ಲಿ ಸಮಾಜದ ಕಲ್ಯಾಣಕ್ಕಾಗಿ ಯಾವುದೇ ಸಮಂಜಸ ಚಟುವಟಿಕೆಗಳನ್ನು ನಡೆಸಿರದಿದ್ದರೆ ಅಥವಾ ಅನ್ಯ ಉದ್ದೇಶಗಳಿಗಾಗಿ ಹಣವನ್ನು ಬಳಸಿಕೊಂಡಿದ್ದರೆ ಕೂಡ ವಿದೇಶಿ ದೇಣಿಗೆ ಪರವಾನಿಗೆಗಳನ್ನು ರದ್ದುಗೊಳಿಸಬಹುದು.

2020ರಲ್ಲಿ ಕೇಂದ್ರವು ಎನ್‌ಜಿಒಗಳಿಂದ ವಿದೇಶಿ ಹಣದ ಬಳಕೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ನಿಯಂತ್ರಿಸಲು ಎಫ್‌ಸಿಆರ್‌ಎಗೆ ತಿದ್ದುಪಡಿಗಳನ್ನು ಮಾಡಿತ್ತು. ಆಗಿನಿಂದ ಹಲವಾರು ಎನ್‌ಜಿಒಗಳು,ಸರಕಾರವು ತಾನು ಒಪ್ಪಿಕೊಳ್ಳದ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳಲು ಕಾಯ್ದೆಯನ್ನು ಬಳಸುತ್ತಿದೆ ಎಂದು ಆರೋಪಿಸಿವೆ.

ಎಫ್‌ಸಿಆರ್‌ಎ ಅಡಿ ಪರವಾನಿಗೆಗಳನ್ನು ರದ್ದುಗೊಳಿಸಲಾಗಿರುವ ಅಥವಾ ನವೀಕರಿಸದಿರುವ ಎನ್‌ಜಿಒಗಳಲ್ಲಿ ಆಕ್ಸ್‌ಫಾಮ್ ಇಂಡಿಯಾ ಮತ್ತು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್‌ನಂತಹ ಲಾಭೋದ್ದೇಶವಿಲ್ಲದ ಮಾನವ ಹಕ್ಕು ಸಂಸ್ಥೆಗಳು ಹಾಗು ಸೆಂಟರ್ ಫಾರ್ ಪಾಲಿಸಿ ರೀಸರ್ಚ್‌ನಂತಹ ಚಿಂತನ ಚಾವಡಿಗಳು ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News