"ಓರ್ವ ಯೋಗಿಯಾಗುವುದು ಆತ ಧರಿಸಿದ ಬಟ್ಟೆಯಿಂದಲ್ಲ, ಮಾತಿನಿಂದ": ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆಗೆ ಅಖಿಲೇಶ್ ಪ್ರತಿಕ್ರಿಯೆ
ಉತ್ತರಪ್ರದೇಶ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ "batenge to katenge" (ವಿಭಜನೆಯಾದ್ರೆ, ನಮ್ಮನ್ನು ಮುಗಿಸ್ತಾರೆ) ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಟ್ಟೆ ಧರಿಸಿದ ಮಾತ್ರಕ್ಕೆ ಓರ್ವ ವ್ಯಕ್ತಿ 'ಯೋಗಿ' ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅಖಿಲೇಶ್ ಯಾದವ್, ಈ ರೀತಿಯ ಭಾಷೆಯ ಬಳಕೆ ಅವರ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಅಗತ್ಯವಾಗಿರುತ್ತದೆ. ಓರ್ವ ಯೋಗಿಯಾಗುವುದು ಆತ ಧರಿಸಿದ ಬಟ್ಟೆಯಿಂದಲ್ಲ, ಮಾತಿನ ಮೂಲಕವಾಗಿದೆ ಎಂದು ಹೇಳಿದ್ದಾರೆ.
ಮಹಾನ್ ಸಂತರು ಯಾವಾಗಲು ಕಡಿಮೆ ಮಾತನಾಡುತ್ತಾರೆ ಮತ್ತು ಅವರು ಜನರ ಕಲ್ಯಾಣಕ್ಕಾಗಿ ಮಾತನಾಡುತ್ತಾರೆ. ಆದರೆ ಇಲ್ಲಿ ಎಲ್ಲವೂ ತಲೆಕೆಳಗಾಗಿದೆ. ಎಲ್ಲರಿಗಿಂತ ಹೆಚ್ಚಾಗಿ ನಾನೇ ದೊಡ್ಡವನು ಎಂದು ಪರಿಗಣಿಸುವ ಒಬ್ಬ ವ್ಯಕ್ತಿ ಯೋಗಿ ಎಂದು ಹೇಗೆ ಹೇಳಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ನೋಟಿಸ್ ನೀಡದೆ ವ್ಯಕ್ತಿಯೊಬ್ಬರ ಮನೆ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ 25 ಲಕ್ಷ ರೂ ದಂಡ ವಿಧಿಸಿದ್ದನ್ನು ಉಲ್ಲೇಖಿಸಿದ ಅಖಿಲೇಶ್ ಯಾದವ್, ಬುಲ್ಡೋಝರ್ ಗಳನ್ನು ಬಳಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಹಿಂದೆಂದೂ ಸರ್ಕಾರಕ್ಕೆ ದಂಡ ವಿಧಿಸಿಲ್ಲ ಎಂದು ಹೇಳಿದ್ದಾರೆ.
"batenge to katenge" ಎಂಬಂತಹ ಟೀಕೆಗಳಿಂದ ದೇಶದ ಜನತೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬ್ರಿಟಿಷರಂತೆ ಬಿಜೆಪಿ ಕೂಡ ಒಡೆದು ಆಳುವುದನ್ನು ನಂಬುತ್ತದೆ ಎಂದು ಹೇಳಿದ್ದರು. ಆದಿತ್ಯನಾಥ್ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ "batenge to katenge" ಹೇಳಿಕೆಯನ್ನು ಬಳಸಿದ್ದರು.