ಹಿಮಾಚಲದಲ್ಲಿ ಕಾವೇರಿದ ʼಸಮೋಸಾʼ ರಾಜಕೀಯ; ಸಿಎಂಗೆ 11 ಸಮೋಸಾ ಆರ್ಡರ್ ಮಾಡಿದ ಬಿಜೆಪಿ ಶಾಸಕ
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ʼಸಮೋಸಾʼ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿಯ ನಡುವೆ ರಾಜಕೀಯ ಜಟಾಪಟಿ ಮುಂದುವರಿದಿದ್ದು, ಬಿಜೆಪಿ ಶಾಸಕರೊಬ್ಬರು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ 11 ಸಮೋಸಾಗಳನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದಾರೆ.
ಮುಖ್ಯಮಂತ್ರಿಗಾಗಿ ತಂದಿದ್ದ ಸಮೋಸವನ್ನು ಅವರ ಭದ್ರತಾ ಸಿಬ್ಬಂದಿಗೆ ನೀಡಲು ಕಾರಣವಾದ ಘಟನೆಗಳ ಬಗ್ಗೆ ಸಿಐಡಿ ತನಿಖೆ ನಡೆಸಲು ಆದೇಶಿಸಿದ್ದಕ್ಕೆ ಸಂಬಂಧಿಸಿ ರಾಜ್ಯದ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹಮೀರ್ಪುರದ ಬಿಜೆಪಿ ಶಾಸಕ ಆಶಿಶ್ ಶರ್ಮಾ ಈ ಪೋಸ್ಟ್ ಮಾಡಿದ್ದಾರೆ.
ರಾಜ್ಯದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವಾಗ ಸರಕಾರ ಇಂತಹ ಸಣ್ಣ ವಿಚಾರಗಳತ್ತ ಗಮನ ಹರಿಸದೆ ನೈಜ ಸಮಸ್ಯೆಗಳತ್ತ ಗಮನ ಹರಿಸಬೇಕು. ಸರಕಾರದ ಕ್ರಮವನ್ನು ಪ್ರತಿಭಟಿಸುವ ಸಲುವಾಗಿ 11 ಸಮೋಸಗಳನ್ನು ಮುಖ್ಯಮಂತ್ರಿಗಳಿಗೆ ಆರ್ಡರ್ ಮಾಡಿದ್ದೇನೆ. ಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸುವುದು ಹೆಚ್ಚು ಮುಖ್ಯ ಎಂಬುದನ್ನು ನೆನಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಅ.21ರಂದು ಸುಖವಿಂದರ್ ಸಿಂಗ್ ಸುಖು ಶಿಮ್ಲಾದ ಸಿಐಡಿ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಮುಖ್ಯಮಂತ್ರಿಗಾಗಿ ತಂದಿದ್ದ ಸಮೋಸಾ ಮತ್ತು ಕೇಕ್ ಗಳನ್ನು ಅವರ ಸಿಬ್ಬಂದಿಗೆ ನೀಡಲಾಗಿತ್ತು. ಈ ಕುರಿತು ಸಿಐಡಿ ತನಿಖೆಗೆ ಸರಕಾರ ಆದೇಶಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.